ಕನ್ನಡ ಚಿತ್ರರಂಗದ ಹಿರಿಯ ನಟ,ನಿರ್ದೇಶಕ, ನಿರ್ಮಾಪಕ ಎಸ್. ನಾರಾಯಣ್ ಅವರ ಪುತ್ರ ಪವನ್ ಎಸ್ ನಾರಾಯಣ್ ಅವರು ತಮ್ಮ ಹೊಸ ಕನಸಿನ ಯಾನವನ್ನು ಆರಂಭಿಸಿದ್ದಾರೆ.
“ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ” ಯನ್ನು ಖ್ಯಾತ ನಿರ್ದೇಶಕ ಭಾರ್ಗವ ಅವರು ಉದ್ಘಾಟನೆ ಮಾಡಿ ಶುಭ ಹಾರೈಸಿದರು.
ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ವಿ.ಮನೋಹರ್, ಎಂ.ಎನ್ ಸುರೇಶ್, ನಾಯಕ ಆದಿತ್ಯ ಹಾಗೂ ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.


ಈ ವೇಳೆ ಮಾತಾನಾಡಿದ ನಿರ್ದೇಶಕ ಭಾರ್ಗವ, ನಾರಾಯಣ್ ಅವರು ನನ್ನನ್ನು ಚೆನ್ನೈನಲ್ಲಿ ಭೇಟಿಯಾಗಿ, ಅವರ ವೃತ್ತಿಜೀವನ ಆರಂಭಿಸಿದರು. ಕೆಲಸದ ಮೇಲೆ ಅವರಿಗಿರುವ ಶ್ರದ್ಧೆಯಿಂದ ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಮಗ ಈಗ ಫಿಲ್ಮ್ ಅಕಾಡೆಮಿ ಆರಂಭಿಸಿದ್ದಾರೆ. ಪವನ್ ಅವರ ನೂತನ ಪ್ರಯತ್ನಕ್ಕೆ ಒಳ್ಳೆಯದಾಗಲಿ ಎಂದು ಹಿರಿಯ ನಿರ್ದೇಶಕ ಭಾರ್ಗವ ಹಾರೈಸಿದರು.
ನನ್ನ ಗುರುಗಳಾದ ಭಾರ್ಗವ ಅವರು ಈ ಫಿಲ್ಮ್ ಅಕಾಡೆಮಿ ಉದ್ಘಾಟಿಸಿದ್ದು ನನಗೆ ಖುಷಿ ತಂದಿದೆ. ಪ್ರೀತಿಯಿಂದ ಇಷ್ಟು ಜನ ಗಣ್ಯರು ಬಂದಿದ್ದೀರಿ ಧನ್ಯವಾದಗಳು. ನನ್ನ ಮಗ ಪವನ್ ನನ್ನ ಜೊತೆಯಿದ್ದು ಸಾಕಷ್ಟು ಅನುಭವ ಪಡೆದುಕೊಂಡಿದ್ದಾನೆ. ಈಗ “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ” ಅರಂಭಿಸಿದ್ದಾನೆ. ಈ ವಿಷಯ ಕುರಿತು ನನ್ನ ಬಳಿ ಪವನ್ ಹೇಳಿದಾಗ, “ಕಲಾ ಸಾಮ್ರಾಟ್” ಎಂಬ ಹೆಸರಿಟ್ಟಿದ್ದಿ. ಆ ಹೆಸರಿಗೆ ಕೆಟ್ಟ ಹೆಸರು ಬರದಂತೆ ನೋಡಿಕ್ಕೊಳ್ಳುವ ಜವಾಬ್ದಾರಿ ನಿನ್ನದು. ಏಕೆಂದರೆ ಎಸ್ ನಾರಾಯಣ್ ಎಂದು ನನ್ನ ತಂದೆಯಿಟ್ಟ ಹೆಸರು. “ಕಲಾ ಸಾಮ್ರಾಟ್” ಜನ ಕೊಟ್ಟಿದ್ದು. ಆ ಹೆಸರಿಗೆ ಏನು ಆಗಬಾರದು ಎಂದು ಹೇಳಿದ್ದೇನೆ. ಪವನ್ ಸಹ ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಾನೆ. ನಾಲ್ಕು ತಿಂಗಳ ಈ ಕೋರ್ಸ್ ನಲ್ಲಿ ಒಂದುವರೆ ಗಂಟೆಯ ಹಾಗೆ ತರಗತಿಗಳಿರುತ್ತದೆ. ನಟನೆ, ನಿರ್ದೇಶನ ಹಾಗೂ ಚಲನಚಿತ್ರದ ಹಲವಾರು ವಿಭಾಗಗಳಲ್ಲಿ ತರಭೇತಿಯನ್ನು “ಕಲಾಸಾಮ್ರಾಟ್ ಫಿಲ್ಮ್ ಅಕಾಡೆಮಿ”ಯಲ್ಲಿ ನೀಡಲಾಗುವುದು ಎಂದು ಎಸ್ ನಾರಾಯಣ್ ಹೇಳಿದರು.
ಅನುಭವಿ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಹಂಚಲಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಹೇಳಿದಂತೆ ಥಿಯೇಟರ್ ಮುಂದೆ ಕಟೌಟ್ ನಿಲ್ಲಿಸಿಕೊಳ್ಳುವಂತಹ ಅದ್ಭುತ ಕಲಾವಿದರು ಈ ಸಂಸ್ಥೆಯಿಂದ ಹೊರಹೊಮ್ಮಲಿ ಎಂದರು.

