ನಮ್ ಟಾಕೀಸ್.ಇನ್ ರೇಟಿಂಗ್ 【3.75 /5】
ಕನ್ನಡ ಚಿತ್ರರಂಗದಿಂದ ಹೊರಹೊಮ್ಮಿರುವ ಮತ್ತೊಂದು ಭರ್ಜರಿ ಪಾನ್ ಇಂಡಿಯನ್ ಸಿನಿಮಾ ‘ಕಬ್ಜ’. ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರ ಇಂದು(ಮಾರ್ಚ್ 17) ಪ್ರಪಂಚದ ವಿವಿಧ ಭಾಗಗಳಲ್ಲಿ ಬಿಡುಗಡೆಯಾಗಿದೆ. ಎಲ್ಲೆಡೆ ಉತ್ತಮ ಪ್ರಶಂಸೆ ಪಡೆಯುತ್ತಿರುವ ಈ ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹಾಗಾದರೆ ಹೇಗಿದೆ ಸಿನಿಮಾ?
ಸ್ವಾತಂತ್ರ್ಯ ಹೋರಾಟಗಾರನ ಇಬ್ಬರು ಮಕ್ಕಳಲ್ಲಿ ಒಬ್ಬ ಕಥೆಯ ಕಥಾನಾಯಕ ‘ಅರ್ಕೇಶ್ವರ’. ತನ್ನ ಅಣ್ಣ ಹಾಗು ಅಮ್ಮನ ಜೊತೆಗೇ ಸಾಮಾನ್ಯ ಜೀವನ ನಡೆಸುತ್ತಿರುವ ಈತ ವಾಯುಪಡೆಯಲ್ಲಿ ಭಡ್ತಿ ಹೊಂದಿರುತ್ತಾನೆ. ಇಷ್ಟೆಲ್ಲಾ ಚೆನ್ನಾಗಿ ನಡೆಯುತ್ತಿರುವ ಜೀವನದಲ್ಲಿ ಅಚಾನಕ್ ಆಗಿ ಆಗುವ ಒಂದು ಘಟನೆ ಅರ್ಕೇಶ್ವರನ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ. ಅಲ್ಲಿಂದ ಮುಂದೆ ಅವನ ಬದುಕು ರೋಮಾಂಚಕ ಪಯಣ. ಸಾಮಾನ್ಯನಾಗಿದ್ದ ಈತ ಅದ್ಹೇಗೆ ಭೂಗತಲೋಕಕ್ಕೆ ಇಳಿದ? ಅಲ್ಲಿ ಹೇಗೇ ಅಸ್ತಿತ್ವ ಕಂಡುಕೊಂಡ? ನಂತರ ಇವನ ಬದುಕು ಏನಾಯಿತು? ಎಲ್ಲಿಗೆ ತಲುಪುತ್ತದೆ ಎನ್ನುವುದೇ ಈ ಕಥೆಯ ಜೀವಾಳ.


ಸಿನಿಮಾದ ಕಥೆಗೆ ಭದ್ರ ಬುನಾದಿ ಹಾಕುವುದು ಮೊದಲಾರ್ಧದ ಜವಾಬ್ದಾರಿಯಾಗಿತ್ತು. ಅಂಡರ್ ವರ್ಡ್ ಅಂದರೇ ಅಲ್ಲಿ ಹಲವು ಪಾತ್ರಗಳು ಇದ್ದೇ ಇರುತ್ತವೆ. ಅಂತೆಯೇ ಇಲ್ಲೂ ಕೂಡ ರಕ್ತಸಿಕ್ತ ಚರಿತ್ರೆಯ ಜೊತೆಗೇ ಒಂದೊಂದೇ ಪಾತ್ರಗಳು, ಅರ್ಕೇಶ್ವರನ ಜೀವನದ ಒಂದೊಂದೇ ಸವಾಲುಗಳು ಬರುತ್ತಲೇ ಹೋಗುತ್ತವೆ. ನೋಡನೋಡುತ್ತ ಭೂಗತಲೋಕದ ಪ್ರಮುಖನಾಗಿ ಅರ್ಕೇಶ್ವರ ಬೆಳೆಯುತ್ತಾನೆ. ತನ್ನ ಸಾಮ್ರಾಜ್ಯವನ್ನ ವಿಸ್ತರಿಸಲೂ ಆರಂಭಿಸುತ್ತಾನೆ. ಆದರೆ ಇದೆಲ್ಲವದನ್ನ ಕೇವಲ ಶಕ್ತಿಪ್ರದರ್ಶನದಿಂದ ಮಾಡದೇ ಯುಕ್ತಿಯ ಪ್ರಯೋಗ ಮಾಡುತ್ತಾನೆ. ತನ್ನ ಪ್ರೇಯಸಿ ಮಧುಮತಿಯನ್ನ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ, ಭೂಗತ ಲೋಕದ ಚಟುವಟಿಕೆ ನಿಲ್ಲುವುದಿಲ್ಲ. ಆದರೆ ಸ್ವಂತ ಮಾವ ವೀರ ಬಹದ್ದೂರ್ ಕೂಡ ಅರ್ಕೇಶ್ವರನಿಗೆ ಒಂದು ಅಡೆತಡೆಯೇ ಅದ್ಹೇಗೆ? ಮುಂದೆ ಇವನ ಈ ರಾಜ್ಯಭಾರ ಎಲ್ಲಿಯವರೆಗೆ ತಲುಪುತ್ತದೆ? ಇದನ್ನೆಲ್ಲಾ ಪ್ರೇಕ್ಷಕರ ಮುಂದೆ ಇಡುವ ಒಂದು ರಕ್ತಗರ್ಭಿತ ರೌಡಿಸಂ ನ ಕಥೆಯೇ ಈ ‘ಕಬ್ಜ’.
ಸಂಪೂರ್ಣ ಆಕ್ಷನ್ ಇಂದಲೇ ತುಂಬಿರುವ ಕಥೆಯನ್ನ ಒಂದು ಸಿನಿಮಾವಾಗಿ ಪ್ರೇಕ್ಷಕನ ಮುಂದಿಡುವಲ್ಲಿ ನಿರ್ದೇಶಕ ಆರ್ ಚಂದ್ರು ಅವರು ಗೆದ್ದಿದ್ದಾರೆ. ದ್ವಿತೀಯಾರ್ಧ ಕೊಂಚ ತಡವಾಗಿ ಓಡುತ್ತದೆ ಎಂದು ಅನಿಸಿದರೂ ಕೂಡ, ಇಲ್ಲಿರುವ ಆಕ್ಷನ್ ದೃಶ್ಯಗಳು, ಅದನ್ನ ತೋರಿಸಿರುವ ರೀತಿ, ತಮ್ಮಲ್ಲಿರುವ ಕಥೆಯನ್ನ ವೈಭವೀಕರಿಸಿ ತೆರೆಮೇಲೆ ತಂದಿರುವುದರಿಂದ ನೋಡುಗನಿಗೆ ಇದೊಂದು ರಸದೌತಣ. ಬೆಳ್ಳಿತೆರೆಯ ಮೇಲೆ ಕಾಣಿಸುವ ಎ ಜೆ ಶೆಟ್ಟಿಯವರ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ರೋಮಾಂಚನ ಮೂಡಿಸುತ್ತವೆ. ಇನ್ನು ಸಂಗೀತ ನಿರ್ದೇಶಕ ರವಿ ಬಸ್ರುರ್ ಅವರ ಹಿನ್ನೆಲೆ ಸಂಗೀತದಲ್ಲಿ ಯಾವ ನ್ಯೂನತೆಯೂ ಇಲ್ಲ. ಈಗಾಗಲೇ ಈ ರೀತಿಯ ಸಿನಿಮಾಗಳಿಗೆ ತಮ್ಮ ಹಿನ್ನೆಲೆ ಸಂಗೀತದ ಮೂಲಕ ಪುಷ್ಟಿ ಕೊಟ್ಟಿದ್ದ ರವಿ ಬಸ್ರುರ್ ‘ಕಬ್ಜ’ ಸಿನಿಮಾದಲ್ಲೂ ತಮ್ಮ ಕೆಲಸವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಇನ್ನು ಅರ್ಕೇಶ್ವರನಾಗಿ ಉಪೇಂದ್ರ ಅವರು ಸಿನಿಮಾ ತುಂಬಾ ತಮ್ಮ ತಾಳ್ಮೆ ಹಾಗು ಗಂಭೀರ್ಯದಿಂದ ಗಮನ ಸೆಳೆಯುತ್ತಾರೆ. ಮಧುಮತಿಯ ಪಾತ್ರಕ್ಕೆ ಬಣ್ಣ ಹಚ್ಚಿರುವ ಶ್ರೀಯ ಶರಣ್ ಅವರ ನಟನೆ ಕೂಡ ಮೆಚ್ಚುವಂತದ್ದು. ಮುರಳಿ ಕೃಷ್ಣ, ನವಾಬ್ ಶಾಹ್ ಸೇರಿದಂತೆ ಪ್ರಮುಖ ನಟರು ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಪಾತ್ರದಿಂದ ಬರುವಂತಹ ಸಂಭಾಷಣೆಗಳು ಗಮನ ಸೆಳೆಯುತ್ತವೆ. ಜೊತೆಗೇ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವ ಇನ್ನೊಬ್ಬ ಸ್ಟಾರ್ ನಟ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡ ತಾವು ಕಾಣುವ ಕಡಿಮೆ ಸಮಯದಲ್ಲೇ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುತ್ತಾರೆ. ಚಿತ್ರದ ಕ್ಲೈಮಾಕ್ಸ್ ನಲ್ಲಿ ಬರುವಂತಹ ವಿಚಾರ ಪ್ರೇಕ್ಷಕನನ್ನ ಇನ್ನಷ್ಟು ಹಿಡಿದಿಡುವುದಷ್ಟೇ ಅಲ್ಲದೇ, ಮುಂದೆ ಏನಾಗಬಹುದು ಎಂಬ ಕುತೂಹಲವನ್ನ ಕೂಡ ಹುಟ್ಟಿಸುವಲ್ಲಿ ಯಶಸ್ವಿಯಾಗುತ್ತದೆ.
ಒಟ್ಟಿನಲ್ಲಿ ಬಹು ಶ್ರೀಮಂತವಾಗಿ ಮೂಡಿಬಂದ ನಮ್ಮ ಕನ್ನಡದ ಮತ್ತೊಂದು ಬ್ಲಾಕ್ ಬಸ್ಟರ್ ಆಕ್ಷನ್ ಪಯಣ ‘ಕಬ್ಜ’. ಹುಟ್ಟಿಸಿದ್ದ ನಿರೀಕ್ಷೆಗಳಿಗೆ ನ್ಯಾಯ ಒದಗಿಸಿ ಕೊಡುವಂತೆ ಸಿನಿಮಾ ಮೂಡಿಬಂದಿದ್ದು, ಚಿತ್ರಮಂದಿರದಲ್ಲಿ ಕೂತು ನೋಡುವ ಪ್ರೇಕ್ಷಕನಿಗೆ ಇದೊಂದು ಭರ್ಜರಿ ಅನುಭವವಾಗುವುದಂತೂ ಸತ್ಯ.

