ಭಾರತದ ಸಿನಿಪ್ರಪಂಚದಾದ್ಯಂತ ಸದ್ಯ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರುತ್ತಿದೆ. ‘ಕೆಜಿಎಫ್’,’ಕಾಂತಾರ’ದಂತಹ ಸಿನಿಮಾಗಳು ಈಗಾಗಲೇ ದೇಶ ಮಾತ್ರವಲ್ಲದೆ ಪ್ರಪಂಚದಗಲಕ್ಕೆ ಕನ್ನಡ ಸಿನಿಮಾಗಳ ಹಿರಿಮೆಯನ್ನ ತಲುಪಿಸಿವೆ. ಸದ್ಯ ಈ ಸಾಲಿಗೆ ಇನ್ನೊಂದು ಸಿನಿಮಾ ಸೇರಿಕೊಂಡಿದೆ. ಅದುವೇ ಈ ಶುಕ್ರವಾರ(ಮಾರ್ಚ್ 17) ಬಿಡುಗಡೆಯದಂತಹ ಆರ್ ಚಂದ್ರು ಅವರ ನಿರ್ದೇಶನದ ‘ಕಬ್ಜ’ ಸಿನಿಮಾ. ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಾ, ಸಿನಿಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಿರುವ ‘ಕಬ್ಜ’ ಸಿನಿಮಾದ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗೆಗಿನ ಮಾಹಿತಿ ಹೊರಬಿದ್ದಿದ್ದು, ಕನ್ನಡ ಚಿತ್ರಪ್ರೇಮಿಗಳ ಹಿರಿಮೆಗೆ ಮತ್ತೊಂದು ಗರಿ ಸಿಕ್ಕಂತಾಗಿದೆ.
ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿ ನಟಿಸಿರುವ ‘ಕಬ್ಜ’ ಸಿನಿಮಾ ಬಿಡುಗಡೆಯಾದ ಮೊದಲ ದಿನದಂದು ಪ್ರಪಂಚದಾದ್ಯಂತ ಸುಮಾರು 54ಕೋಟಿಯಷ್ಟು ಗಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಕಾರ ನಮ್ಮ ಕನ್ನಡ ಭಾಷೆಯಲ್ಲಿ ಸುಮಾರು 20ಕೋಟಿಗಳ ಮೊದಲ ದಿನದ ಆರಂಭ ಕಂಡರೆ, ಹಿಂದಿ ಭಾಷೆಯಲ್ಲಿ ಸುಮಾರು 12ಕೋಟಿ, ತಮಿಳು ಭಾಷೆಯಲ್ಲಿ 5ಕೋಟಿ, ತೆಲುಗಿನಲ್ಲಿ 7ಕೋಟಿ, ಮಲಯಾಳಂ ನಲ್ಲಿ 3ಕೋಟಿಗಳಷ್ಟು ಮೊದಲ ದಿನದ ಗಳಿಕೆಯನ್ನ ಕಂಡು ದೇಶದಾದ್ಯಂತ ಯಶಸ್ವಿ ಪ್ರದರ್ಶನಕ್ಕೆ ‘ಕಬ್ಜ’ ಸಿನಿಮಾ ಮುನ್ನುಗ್ಗುತ್ತಿದೆ. ಇನ್ನು ಹೊರದೇಶಗಳಲ್ಲಿ ಮೊದಲ ದಿನ ಸುಮಾರು 8ಕೋಟಿಯನ್ನ ಬಾಚಿಕೊಂಡಿರುವ ‘ಕಬ್ಜ’ ಸಿನಿಮಾ ಎಲ್ಲೆಡೆ ಅದ್ಭುತ ಪ್ರದರ್ಶನ ಕಾಣುತ್ತಿದೆ.
ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿ, ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ಕನ್ನಡದ ಮೂರು ಮುಖ್ಯ ಸ್ಟಾರ್ ನಟರು ಕಾಣಿಸಿಕೊಂಡಿದ್ದಾರೆ. ನಾಯಕನಾಗಿ ರಿಯಲ್ ಸ್ಟಾರ್ ಉಪೇಂದ್ರ ಅವರು ಬಣ್ಣ ಹಚ್ಚಿದರೆ, ಇನ್ನು ಎರಡೂ ಬಹುಮುಖ್ಯ ಪಾತ್ರಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಕಾಣಿಸಿಕೊಂಡಿದ್ದಾರೆ. ಕಥಾನಾಯಕಿಯಾಗಿ ಶ್ರೀಯ ಶರಣ್, ಜೊತೆಗೇ ಪ್ರಮುಖ ಪಾತ್ರಗಳಲ್ಲಿ ಮುರುಳಿ ಶರ್ಮ, ನವಬ್ ಶಾಹ್, ಸುಧಾ, ಸುನಿಲ್ ಪುರಾಣಿಕ್, ಪ್ರಮೋದ್ ಶೆಟ್ಟಿ, ಅವಿನಾಶ್ ಸೇರಿದಂತೆ ಹಲವು ಗಣ್ಯ ನಟರು ಚಿತ್ರದಲ್ಲಿದ್ದಾರೆ. ಮೂಲಗಳ ಪ್ರಕಾರ ಎರಡನೇ ದಿನವೂ ಕೂಡ ದೊಡ್ಡಮಟ್ಟದ ಗಳಿಕೆಯನ್ನೇ ಚಿತ್ರಮಂದಿರಗಳಲ್ಲಿ ಕಂಡು ಮುಂದುವರೆಯುತ್ತಿದೆ ‘ಕಬ್ಜ’.

