ಆರ್ ಚಂದ್ರು ಅವರ ನಿರ್ದೇಶನದ, ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಪ್ರಪಂಚದ ವಿವಿಧ ಮೂಲೆಗಳ ಸಿನಿಪ್ರೇಮಿಗಳ ಮನಗೆಲ್ಲುತ್ತಿದೆ. ಈಗಾಗಲೇ ಟ್ರೈಲರ್ ಗೆ ಬರುತ್ತಿರುವ ಪ್ರತಿಕ್ರಿಯೆ ಹಾಗು ಹೆಚ್ಚುತ್ತಿರೋ ಸಿನಿಮಾದೆಡೆಗಿನ ನಿರೀಕ್ಷೆಗಳಿಂದ ಸಂತುಷ್ಟಾರಾಗಿರುವ ಚಿತ್ರತಂಡ ಇದೀಗ ಮತ್ತೊಂದು ಸಂತಸದ ಸುದ್ದಿಯನ್ನ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾ ‘ಕಬ್ಜ’ ದ ತಮಿಳು ವಿತರಕರ ಮಾಹಿತಿಯನ್ನ ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.
ತಮಿಳು ಮಾತ್ರವಲ್ಲದೆ ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ‘ಲೈಕಾ ಪ್ರೊಡಕ್ಷನ್ಸ್’ ನಮ್ಮ ಕನ್ನಡದ ‘ಕಬ್ಜ’ ಸಿನಿಮಾದೊಂದಿಗೆ ಕೈ ಜೋಡಿಸಿದ್ದಾರೆ. ಎಲ್ಲೆಡೆ ಉತ್ತಮ ಮಾತುಗಳನ್ನು ಕೇಳುತ್ತಿರುವ ‘ಕಬ್ಜ’ ಸಿನಿಮಾವನ್ನು ತಮಿಳು ನಾಡು ಪ್ರಾಂತ್ಯದಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿ ಇದೀಗ ‘ಲೈಕಾ ಪ್ರೊಡಕ್ಷನ್ಸ್’ ಕೈಯಲ್ಲಿದೆ. ‘ಲೈಕಾ’ ಸಂಸ್ಥೆಯ ಮುಖ್ಯಸ್ಥರಾಗಿರುವ ಸುಭಾಷ್ ಕರಣ್ ಅವರು ಸ್ವತಃ ‘ಕಬ್ಜ’ ಸಿನಿಮಾವನ್ನ ಕಂಡು, ಮೆಚ್ಚಿ ಬಹುಕೋಟಿಯ ‘ಕಬ್ಜ’ ಸಿನಿಮಾದ ವಿತರಣೆಯ ಹಕ್ಕನ್ನೂ ಖರೀದಿ ಮಾಡಿದ್ದಾರೆ. ಇದು ನಮ್ಮೆಲ್ಲರ ಬಹುನಿರೀಕ್ಷಿತ ‘ಕಬ್ಜ’ ಸಿನಿಮಾಗೆ ಟೋಲಿವುಡ್ ನಲ್ಲಿ ದೊರೆತ ಮೊದಲ ಜಯ ಅನ್ನಬಹುದೇನೋ. ಸ್ವತಃ ‘ಲೈಕಾ’ ಸಂಸ್ಥೆ ಈ ವಿಚಾರವನ್ನ ಅಧಿಕೃತವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ. ಈ ಹೆಜ್ಜೆ ‘ಕಬ್ಜ’ ಸಿನಿಮಾದ ಯಶಸ್ಸಿಗೆ ಒಂದು ಹೊಸ ಮೈಲಿಗಲ್ಲಾಗಲಿದೆ.
ಎಲ್ಲೆಡೆ ನಿರೀಕ್ಷೆಯ ಪರ್ವತಗಳಿಗೆ ಕಾರಣವಾಗಿರುವ ‘ಕಬ್ಜ’ ಸಿನಿಮಾ ಇದೆ ಮಾರ್ಚ್ 17ರಂದು ಪ್ರಪಂಚದ ಹಲವು ಜಾಗಗಳಲ್ಲಿ ಕನ್ನಡ ಸೇರಿದಂತೆಯೇ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಉಪೇಂದ್ರ ಅವರು ನಾಯಕರಾದರೆ, ಶ್ರೀಯ ಶರಣ್ ನಾಯಕಿ, ಜೊತೆಗೇ ಪ್ರಮುಖ ಪಾತ್ರಗಳಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುರಳಿ ಕೃಷ್ಣ, ಅವಿನಾಶ್ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟರನ್ನ ಈ ಸಿನಿಮಾದಲ್ಲಿ ಕಾಣಲಾಗಿದೆ. ರವಿ ಬಸ್ರುರ್ ಅವರ ಸಂಗೀತವಿರುವ ಈ ಚಿತ್ರ ‘ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್’ ಬ್ಯಾನರ್ ಅಡಿಯಲ್ಲಿ ಸಿದ್ಧವಾಗಿದೆ. ಈಗಾಗಲೇ ಹಿಂದಿಯಲ್ಲಿ ‘ಆನಂದ್ ಪಂಡಿತ್ ಮೋಶನ್ ಪಿಕ್ಚರ್ಸ್’ ಸಿನಿಮಾ ಬಿಡುಗಡೆ ಮಾಡುವುದಾಗಿ ಬಹಳ ಹಿಂದೆಯೇ ಘೋಷಣೆಯಾಗಿತ್ತು, ಇದೀಗ ತಮಿಳು ಚಿತ್ರರಂಗದಲ್ಲೂ ಕೂಡ ‘ಲೈಕಾ ಪ್ರೊಡಕ್ಷನ್ಸ್’ನಂತಹ ದೊಡ್ಡ ತಂಡವೇ ‘ಕಬ್ಜ’ ಸಿನಿಮಾಗಾಗಿ ಮುಂದೆ ಬಂದಿರುವುದು ಸಂತಸದ ವಿಚಾರ. ಇದೆ ಮಾರ್ಚ್ 17ಕ್ಕೆ ಈ ಎಲ್ಲಾ ನಿರೀಕ್ಷೆಗಳಿಗೆ ಚಿತ್ರಮಂದಿರಗಳಲ್ಲೇ ಉತ್ತರ ಸಿಗಲಿದೆ.

