ರಿಯಲ್ ಸ್ಟಾರ್ ಉಪೇಂದ್ರ ಅವರು ಹಾಗೂ ಶ್ರೀಯ ಶರಣ್ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವಂತಹ ಬಹುನಿರೀಕ್ಷಿತ ಪಾನ್ ಇಂಡಿಯನ್ ಸಿನೆಮಾ ‘ಕಬ್ಜ’ ತನ್ನ ಬಿಡುಗಡೆಯ ದಿನಾಂಕಕ್ಕೆ ಸಮೀಪವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರೋ ಸಿನಿಮಾದ ಟೀಸರ್, ಪ್ರಪಂಚದ ವಿವಿಧ ಭಾಗಗಳ ಸಿನಿಪ್ರೇಮಿಗಳನ್ನ ಚಿತ್ರದ ಕಡೆಗೆ ಮುಖ ಮಾಡುವಂತೆ ಮಾಡಿತ್ತು. ತದನಂತರ ಬಂದಂತಹ ಚಿತ್ರದ ಹಾಡುಗಳು ಕೂಡ ಸಿನಿಮಾದ ಮೇಲಿನ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸಿನಿಮಾದ ಟ್ರೈಲರ್ ಕೂಡ ಬಿಡುಗಡೆಗೆ ಸಿದ್ದವಾಗಿದ್ದು, ಇಂದು(ಮಾರ್ಚ್ 4) ಸಂಜೆ ಯಾವುದೇ ಕ್ಷಣದಲಾದರೂ ಟ್ರೈಲರ್ ಹೊರಬೀಳಬಹುದು. ಈ ಟ್ರೈಲರ್ ಗೆ ಹಾತೊರೆದು ಕಾಯುತ್ತಿದ್ದ ಸಿನಿಪ್ರೇಮಿಗಳಿಗೆ ಚಿತ್ರತಂಡ ಇದೀಗ ಇನ್ನೊಂದು ಸಂತಸದ ಸುದ್ದಿ ನೀಡಿದೆ. ಹೆಸರಾಂತ ನಿರ್ದೇಶಕ ಆರ್ ಚಂದ್ರು ಅವರು ಆಕ್ಷನ್ ಕಟ್ ಹೇಳಿರುವ, ಬಹುನಿರೀಕ್ಷಿತ ‘ಕಬ್ಜ’ ಸಿನಿಮಾದ ಟ್ರೈಲರ್ ಅನ್ನು ‘ಬಿಗ್ ಬಿ’ ಎಂದೇ ಖ್ಯಾತರಾಗಿರುವ ಅಮಿತಾಬ್ ಬಚ್ಚನ್ ಅವರು ಬಿಡುಗಡೆ ಮಾಡಲಿದ್ದಾರೆ.
ಈಗಾಗಲೇ ಉಪೇಂದ್ರ, ಶ್ರೀಯ ಶರಣ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮುರುಳಿ ಕೃಷ್ಣ ಸೇರಿದಂತೆ ದೊಡ್ಡದೊಡ್ಡವರನ್ನ ಒಳಗೊಂಡ ತಾರಾಗಣ ಇರುವ ‘ಕಬ್ಜ’ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಕೂಡ ಇರಲಿದ್ದಾರೆ ಎಂಬ ಸ್ಪೋಟಕ ಸುದ್ದಿಯನ್ನ ನಿರ್ದೇಶಕ ಚಂದ್ರು ಅವರು ನಿನ್ನೆ(ಮಾರ್ಚ್ 3)ಯಷ್ಟೇ ಅಧಿಕೃತವಾಗಿ ಘೋಷಿಸಿ ಎಲ್ಲಿಲ್ಲದ ಸಂತಸವನ್ನ ಅಭಿಮಾನಿಗಳಿಗೆ ನೀಡಿದ್ದರು. ಇದೀಗ ತಮ್ಮ ಸಿನಿಮಾದ ಟ್ರೈಲರ್ ಅನ್ನು ಅಮಿತಾಭ್ ಬಚ್ಚನ್ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸುವುದರ ಮೂಲಕ ಈ ಖುಷಿಯನ್ನ ಇಮ್ಮಡಿ ಮಾಡಿದ್ದಾರೆ.
ಮಾರ್ಚ್ 4ರ ಸಂಜೆ 5:02ಕ್ಕೆ ಬಿಡುಗಡೆಗೆ ನಿಗದಿಯಾಗಿದ್ದ ‘ಕಬ್ಜ’ ಸಿನಿಮಾದ ಟ್ರೈಲರ್ ಅಮಿತಾಭ್ ಬಚ್ಚನ್ ಅವರು ಬಿಡುಗಡೆ ಮಾಡುತ್ತಿರುವ ಕಾರಣದಿಂದ ಕೊಂಚ ತಡವಾಗಿ ಲೋಕಾರ್ಪಣೆಗೊಳ್ಳಲಿದೆಯಂತೆ. ‘ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್’ ಬ್ಯಾನರ್ ಅಡಿಯಲ್ಲಿ ಸ್ವತಃ ಆರ್ ಚಂದ್ರು ಅವರೇ ನಿರ್ದೇಶಿಸುತ್ತಿರುವ ಈ ಸಿನಿಮಾಗೆ ರವಿ ಬಸ್ರುರ್ ಅವರ ಸಂಗೀತದ ಬಲವೂ ಇದೆ. ಈ ಎಲ್ಲಾ ಅಂಶಗಳಿಂದ ಎಲ್ಲರ ಕಾತುರದ ಕಾಯುವಿಕೆಗೆ ಕಾರಣವಾಗಿರುವ ‘ಕಬ್ಜ’ ಸಿನಿಮಾ ಇದೆ ಮಾರ್ಚ್ 17ನೇ ತಾರೀಕು ಜಗತ್ತಿನಾದ್ಯಂತ ದೊಡ್ಡಮಟ್ಟದಲ್ಲಿ ತೆರೆಕಾಣಲಿದೆ. ಸದ್ಯ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗುತ್ತಿದ್ದೂ, ಟ್ರೈಲರ್ ಅನವರಣಕ್ಕೆ ಕ್ಷಣಗಣನೆ ಆರಂಭವಾಗಿದೆ.

