ಫ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಿದ್ದವಾಗಿರೋ ‘ಕಬ್ಜ’ ಸಿನಿಮಾ ಯಾರಿಗೇ ತಾನೇ ಗೊತ್ತಿಲ್ಲ? ಆರ್ ಚಂದ್ರು ನಿರ್ದೇಶನದ ಈ ಸಿನಿಮಾ ದಿನದಿಂದ ದಿನಕ್ಕೆ ತನ್ನ ಮೇಲಿನ ನಿರೀಕ್ಷೆಗಳನ್ನ ಹೆಚ್ಚಿಸಿಕೊಳ್ಳುತ್ತಲೇ ಬರುತ್ತಿದೆ. ಇದೇ ಮಾರ್ಚ್ 17ರಂದು ಪ್ರಪಂಚದ ವಿವಿಧ ಜಾಗಗಳಲ್ಲಿ ಬಿಡುಗಡೆಗೆ ಸಿದ್ದವಾಗಿರುವ ಈ ಸಿನಿಮಾದ ಟ್ರೈಲರ್ ಇದೇ ಮಾರ್ಚ್ 4ರಂದು ಬಿಡುಗಡೆಯಾಗುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ತಾರಾಗಣಕ್ಕೇನು ಕಡಿಮೆಯಿಲ್ಲ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಶ್ರೀಯ ಶರಣ್, ಮುರುಳಿ ಶರ್ಮ ಸೇರಿದಂತೆ ಹಲವು ಗಣ್ಯ ನಟರು ಇರುವ ಈ ಸಿನಿಮಾಗೆ ಸದ್ಯ ಕನ್ನಡದ ಸ್ಟಾರ್ ನಟರೊಬ್ಬರ ಸೇರ್ಪಡೆ ಅಧಿಕೃತವಾಗಿ ಘೋಷಣೆಯಾಗಿದೆ. ಅವರೇ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದಾಗಿ ನಟಿಸಿರುವ ‘ಕಬ್ಜ’ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಕೂಡ ನಟಿಸಲಿದ್ದಾರೆ ಎಂಬ ಸುದ್ದಿ ಅನದಿಕಾಲದಿಂದ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಅಧಿಕೃತ ಘೋಷಣೆ ಆಗಿರಲಿಲ್ಲ. ಈಗಾಗಲೇ ಎಲ್ಲೆಡೆ ಬೃಹತ್ ನಿರೀಕ್ಷೆ ಹುಟ್ಟಿಸಿರೋ ‘ಕಬ್ಜ’ ತಂಡ, ಇಂದು(ಮಾರ್ಚ್ 3) ಹೊಸ ಪೋಸ್ಟರ್ ಒಂದರ ಮೂಲಕ ಶಿವರಾಜ್ ಕುಮಾರ್ ಅವರು ಕೂಡ ತಮ್ಮ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬ ವಿಚಾರವನ್ನ ಹೊರಹಾಕಿದೆ. ತಮ್ಮ ಕಂಗಳ ಮೂಲಕವೇ ಮಾಸ್ ಭಾವನೆಯನ್ನ ನೋಡುಗನ ಮನಸಿನಲ್ಲಿ ತುಂಬುವಂತಹ ಕಲೆ ಶಿವಣ್ಣನದ್ದು. ಹೀಗಿರುವಾಗ ಅವರೊಬ್ಬ ಗ್ಯಾಂಗ್ ಸ್ಟರ್ ಆಗಿ ಕಾಣಿಸಿಕೊಂಡರೆ! ಪೋಸ್ಟರ್ ಹೊರಬಿದ್ದ ತಕ್ಷಣವೇ ಕಾಡ್ಗಿಚ್ಚಿನಂತೆ ಈ ಸುದ್ದಿ ಎಲ್ಲೆಡೆ ಹರಿದಾಡಿದೆ. ಉಪೇಂದ್ರ, ಸುದೀಪ್ ಹಾಗು ಶಿವಣ್ಣ ಮೂರೂ ನಟರು ಇರುವಂತಹ ಈ ಪೋಸ್ಟರ್ ನೋಡುವುದಕ್ಕೆ ಅಭಿಮಾನಿಗಳಿಗೆ ಎಲ್ಲಿಲ್ಲದ ಆನಂದ ಉಂಟಾಗುತ್ತಿದೆ. ಇನ್ನೂ ಈ ಮೂವರನ್ನ ಒಟ್ಟಾಗಿ ಬೆಳ್ಳಿತೆರೆ ಮೇಲೆ ನೋಡಲು ಸಿನಿಪ್ರೇಮಿಗಳಲ್ಲಿರುವ ಕಾತರದ ಬಗ್ಗೆ ಮಾತುಗಳೇ ಇಲ್ಲ. ಇದೊಂದು ಗ್ಯಾಂಗ್ ಸ್ಟರ್ ಆಕ್ಷನ್ ಡ್ರಾಮಾ. ಹಾಗಾಗಿ ಈ ಮೂವರನ್ನು ಗ್ಯಾಂಗ್ ಸ್ಟರ್ ಗಳಾಗಿ ಸಿನಿಮಾದಲ್ಲಿ ನೋಡಬಹುದು. ಬಿಡುಗಡೆಯಾದ ಪೋಸ್ಟರ್ ನಲ್ಲಿ ಮೂವರ ಲುಕ್ ಕಾಣುತ್ತಿದ್ದು, ಶಿವಣ್ಣ ಕೂಡ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ಪ್ರೇಮಿಗಳಿಗೆ ‘ಕಬ್ಜ’ ಸಿನಿಮಾ ಒಂದು ಹಬ್ಬವೇ ಆಗುವಲ್ಲಿ ಯಾವುದೇ ಸಂದೇಹವಿಲ್ಲ.
ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಆರ್ ಚಂದ್ರು ಅವರೇ ನಿರ್ಮಿಸಿರುವ ಈ ಸಿನಿಮಾ ಇದೇ ಮಾರ್ಚ್ 17ಕ್ಕೆ ಬಿಡುಗಡೆ ಕಾಣುತ್ತಿದೆ. ರವಿ ಬಸ್ರುರ್ ಅವರ ಸಂಗೀತ, ಎ ಜೆ ಶೆಟ್ಟಿ ಯವರ ಛಾಯಾಗ್ರಾಹಣ ಈಗಾಗಲೇ ಚಿತ್ರದ ಬಗೆಗಿನ ನಿರೀಕ್ಷೆಯನ್ನ ಹೆಚ್ಚಿಸಿದೆ. ಈಗ ಶಿವಣ್ಣ ಕೂಡ ಸಿನಿಮಾದಲ್ಲಿರಲಿದ್ದಾರೆ ಎಂಬ ಸುದ್ದಿ ‘ಕಬ್ಜ’ ಚಿತ್ರವನ್ನ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದೆ. ಚಿತ್ರದ ಟ್ರೈಲರ್ ಮಾರ್ಚ್ 4 ರಂದು ಬಿಡುಗಡೆಯಾಗುತ್ತಿದೆ. ಒಟ್ಟಿನಲ್ಲಿ ‘ಕಬ್ಜ’ ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಇತಿಹಾಸ ಬರೆಯಲು ಎಲ್ಲಾ ಸಿದ್ಧತೆಗಳೊಂದಿಗೆ ಸಿದ್ಧವಾಗಿದೆ.

