ರಿಯಲ್ ಸ್ಟಾರ್ ಉಪೇಂದ್ರ ಹಾಗು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕಬ್ಜ’. ಸದ್ಯ ಭಾರತೀಯ ಸಿನಿರಂಗದಲ್ಲೇ ಸದ್ದು ಮಾಡುತ್ತಿರುವ ಕನ್ನಡದ ಪಾನ್-ಇಂಡಿಯನ್ ಸಿನಿಮಾ ಇದು. ಹೆಸರಾಂತ ನಿರ್ದೇಶಕರಾದ ಆರ್ ಚಂದ್ರು ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಇದೇ ಮಾರ್ಚ್ 17ರಂದು ಪ್ರಪಂಚದಾದ್ಯಂತ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ನಿಟ್ಟಿನಲ್ಲಿ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇದೇ ಅಂಗವಾಗಿ ಇದೀಗ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನ ಆಯೋಜಿಸಲಾಗಿದ್ದು, ಅದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಈಗಾಗಲೇ ‘ಕಬ್ಜ’ ಸಿನಿಮಾದ ಎರಡು ಹಾಡುಗಳು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸಿನಿರಸಿಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರವಿ ಬಸ್ರುರ್ ಅವರ ಸಂಗೀತವಿರುವ ಈ ಸಿನಿಮಾದಲ್ಲಿನ ಹಾಡುಗಳು ಕೂಡ ಸಿನಿಮಾದಷ್ಟೇ ಸದ್ದು ಮಾಡಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಈಗಾಗಲೇ ಬಿಡುಗಡೆಯಾದ ಎರಡೂ ಹಾಡುಗಳು ಈ ಮಾತಿಗೆ ಹೊರತಾಗಿಲ್ಲ. ಸದ್ಯ ಈ ಕುತೂಹಲಕ್ಕೆ ತೆರೆ ಬೀಳುವ ಸಂಧರ್ಭ ಬಂದಿದೆ. ಇದೇ ಫೆಬ್ರವರಿ 26ರಂದು ‘ಕಬ್ಜ’ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗುತ್ತಿದೆ. ಬರೀ ಒಂದು ಹಾಡು ಮಾತ್ರ ಅಲ್ಲದೇ, ಸಿನಿಮಾದ ಸಂಪೂರ್ಣ ಜೂಕ್ ಬಾಕ್ಸ್ ಅನ್ನು ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.
ಫೆಬ್ರವರಿ 26ರಂದು ಸಿನಿಮಾದ ನಿರ್ದೇಶಕರಾದ ಆರ್ ಚಂದ್ರು ಅವರ ಹುಟ್ಟೂರಾದ ಶಿಡ್ಲಘಟ್ಟದಲ್ಲಿ ಈ ಕಾರ್ಯಕ್ರಮವನ್ನ ಆಯೋಜಿಸಲಾಗುತ್ತಿದೆ. ಚಂದ್ರು ಅವರ ತವರೂರಿನಲ್ಲಿ ಸುಮಾರು ಲಕ್ಷಾಂತರ ಪ್ರೇಕ್ಷಕರು ಒಮ್ಮೆಗೆ ಸೇರಿ ಕಾರ್ಯಕ್ರಮ ವೀಕ್ಷಿಸುವಷ್ಟು ಸ್ಥಳ ಸಿಗುವಂತೆ ಎಲ್ಲಾ ಸಿದ್ಧತೆ ನಡೆದಿದೆ. ವಿಶೇಷವೆಂದರೆ ಈ ಕಾರ್ಯಕ್ರಮಕ್ಕೆ ಗಣ್ಯ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ಶ್ರೀಯ ಶರಣ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್ ಮುಂತಾದವರು ಕೂಡ ಬಂದು ಹರಸಲಿದ್ದಾರೆ. ಅಷ್ಟೇ ಅಲ್ಲದೇ ತೆಲುಗು, ತಮಿಳು,ಮಲಯಾಳಂ ಹಾಗು ಹಿಂದಿ ಚಿತ್ರರಂಗದ ಗಣ್ಯ ಕಲಾವಿದರು ಕೂಡ ಬರಲಿದ್ದಾರೆ ಎಂಬ ಸುದ್ದಿಯಿದೆ. ತಮ್ಮದೇ ಊರಿನಲ್ಲಿ, ಲಕ್ಷಾಂತರ ಸಿನಿಪ್ರೇಮಿಗಳ ನಡುವಿನಲ್ಲಿ, ತಮ್ಮ ಮೊದಲ ಪಾನ್-ಇಂಡಿಯನ್ ಸಿನಿಮಾ ‘ಕಬ್ಜ’ದ ಹಾಡುಗಳನ್ನ ಲಕ್ಷಾಂತರ ಊರಿನವರ ಮುಂದೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಯನ್ನು ನಿರ್ದೇಶಕ ಆರ್ ಚಂದ್ರು ಅವರು ಮಾಡಿಕೊಳ್ಳುತ್ತಿದ್ದಾರೆ.
‘ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್’ ಸಂಸ್ಥೆಯ ನಿರ್ಮಾಣದಲ್ಲಿ ಮೂಡಿಬಂದಿರುವ ‘ಕಬ್ಜ’ ಸಿನಿಮಾ ಒಂದು ಪಕ್ಕ ಆಕ್ಷನ್ ಎಂಟರ್ಟೈನರ್ ಆಗಿರಲಿದೆ. ಭಾರತೀಯ ಸಿನಿರಂಗದಲ್ಲಿನ ಮುಂದಿನ ದೊಡ್ಡ ಸಿನಿಮಾ ಎಂದೂ ಎಲ್ಲೆಡೆ ಮಾತನಾಡುವಂತೆ ಮಾಡಿರುವ ಈ ಸಿನಿಮಾದಲ್ಲಿ, ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯ ಶರಣ್ ಇನ್ನೂ ಹಲವು ನಟನಟಿಯರು ನಟಿಸಿದ್ದಾರೆ. ಇದೇ ಮಾರ್ಚ್ 17ಕ್ಕೆ ಸಿನಿಮಾ ತೆರೆಕಾಣಲಿದ್ದು , ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಎಲ್ಲರ ನಿರೀಕ್ಷೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಇನ್ನೇನಿದ್ದರೂ ಚಿತ್ರತಂಡದ ಪ್ರಚಾರ ಕಾರ್ಯ ಹಾಗು ಪರಿಶ್ರಮಕ್ಕೆ ಉತ್ತರ ಕೊಡಬೇಕಿದೆ ಸಿನಿಮಾ.

