ಸದ್ಯ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ, ಎಲ್ಲೆಡೆ ಭಾರೀ ನಿರೀಕ್ಷೆಯನ್ನು ಹುಟ್ಟಿಸಿ, ಸದ್ಯದಲ್ಲೇ ತೆರೆಮೇಲೆ ಬರಲು ಸಿದ್ದವಾಗಿರುವ ಸಿನಿಮಾವೆಂದರೆ ಎಲ್ಲರ ಬಾಯಲ್ಲಿ ಮೊದಲು ಬರುವ ಹೆಸರೇ ‘ಕಬ್ಜ’. ಆರ್ ಚಂದ್ರು ಅವರ ನಿರ್ದೇಶನದಲ್ಲಿ ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯಾತಿಗಣ್ಯ ನಟರುಗಳು ನಟಿಸುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಶ್ರೀಯ ಶರಣ್ ಅವರು ನಟಿಸಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯ ಶ್ರೀಯ ಶರಣ್ ಅವರ ನಾಟ್ಯವೈಭವವನ್ನ ತೋರಿಸುವಂತಹ ಹಾಡಿನ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ರವಿ ಬಸ್ರುರ್ ಅವರ ಸಂಗೀತವಿರೋ ‘ಕಬ್ಜ’ ಸಿನಿಮಾದ ಟೈಟಲ್ ಟ್ರ್ಯಾಕ್ ಈಗಾಗಲೇ ಬಿಡುಗಡೆಯಗಿತ್ತು. ಇದೀಗ ಎರಡನೇ ಹಾಡನ್ನ ಬಿಡುಗಡೆಗೊಳಿಸಿದ್ದಾರೆ. ನಟರಾಜನಿಗೆ ವಂದಿಸುತ್ತಾ, ತನ ಸಖಿಯರೊಂದಿಗೆ ಸಂತಸದಿಂದ ಕುಣಿಯುವ ನವಿಲಿನಂತಿನ ನರ್ತಕಿ ಆಗಿ ಶ್ರೀಯ ಶರಣ್ ಅವರು ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರಂಗರಾಜನ್ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದ್ದು, ಕೇಳುವ ಕಿವಿಗಳಿಗೂ ಕೂಡ ಇಂಪಾಗಿ ನಾಟುತ್ತದೆ. ಅತ್ಯಂತ ಶ್ರೀಮಂತವಾಗಿ ಹಾಡಿನ ಚಿತ್ರೀಕಾರಣವಾಗಿರುವುದು ಪ್ರತೀ ದೃಶ್ಯದಲ್ಲೂ ಎದ್ದು ಕಾಣುತ್ತದೆ. ಸದ್ಯ ಸಿನಿರಸಿಕರಿಂದ ಹಾಡು ಅತ್ಯುತ್ತಮ ಪ್ರಶಂಸೆಯನ್ನ ಪಡೆಯುತ್ತಿದೆ.
ಇದೇ ಮಾರ್ಚ್ 17ರಂದು ಪಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ‘ಕಬ್ಜ’ ಸಿನಿಮಾ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಸಿನಿರಸಿಕರನ್ನ ತನ್ನತ್ತ ಸೆಳೆಯುತ್ತಿದೆ. ದಿನಕಳೆದಂತೆ ‘ಕಬ್ಜ’ ಸಿನಿಮಾದ ಬಗೆಗಿನ ನಿರೀಕ್ಷೆಯು ಹೆಚ್ಚಾಗುತ್ತಲೇ ಇದೆ. ಸದ್ಯ ಬಿಡುಗಡೆ ಹತ್ತಿರ ಬರುತ್ತಿದ್ದು, ಪ್ರಚಾರ ಕಾರ್ಯಕ್ಕೆ ಸಂಭಂದಿಸಿದ ಕೆಲಸಗಳು ಭರದಿಂದ ಸಾಗುತ್ತಿವೆ. ಅದೇ ಅಂಗವಾಗಿ ಬಿಡುಗಡೆಯಾದ ಈ ಎರಡನೇ ಹಾಡು ‘ನಮಾಮಿ ನಮಾಮಿ’ ಶ್ರೀಯ ಶರಣ್ ಅವರಿಂದ ಹಾಗು ರವಿ ಬಸ್ರುರ್ ಅವರ ಸಂಗೀತದಿಂದ ಎಲ್ಲೆಡೆ ಸದ್ದು ಮಾಡುತ್ತಿದೆ. ಕಿನ್ನಲ್ ರಾಜ್ ಅವರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ನೃತ್ಯ ಸಂಯೋಜನೆ, ಸಂಗೀತ, ಸೆಟ್ ಗಳು, ಚಿತ್ರೀಕರಣ ಎಲ್ಲವೂ ಶ್ರೀಮಂತವಾಗಿ ಅಷ್ಟೇ ಸುಂದರವಾಗಿ ಮೂಡಿಬಂದಿವೆ.

