“ಜೂಲಿಯೆಟ್ ಎಂದಾಕ್ಷಣ ಬರೀ, ರೋಮಿಯೋ ಜೂಲಿಯೆಟ್ ರ ಪ್ರೇಮಕತೆಯಷ್ಟೇ ಅಲ್ಲ. ಅಲ್ಲದೇ ನಮ್ಮೀ ಸಿನಿಮಾದಲ್ಲಿ ರೋಮಿಯೋ ಪಾತ್ರಕ್ಕೆ ಆಸ್ತಿತ್ವವೇ ಇಲ್ಲ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಇಲ್ಲಿ ಮಾಡಿದ ತಪ್ಪಿಗೆ ಇಲ್ಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ವಿಚಾರವನ್ನ ಸಾರುವಂತಹ ಚಿತ್ರ ನಮ್ಮ ‘ಜೂಲಿಯೆಟ್ 2’.” ಎಂದು ತಮ್ಮ ‘ಜೂಲಿಯೆಟ್ 2’ ಸಿನಿಮಾದ ಬಗೆಗೆ ಸಂತಸದಿಂದ ಹೇಳಿಕೊಳ್ಳುತ್ತಾರೆ ತಮ್ಮ ಮೊದಲ ಸಿನಿಮಾವನ್ನ ಯಶಸ್ವಿಯಾಗಿ ಮುಗಿಸಿರುವ ಸಂತಸದಲ್ಲಿರುವ ನಿರ್ದೇಶಕರಾದ ವಿರಾಟ್ ಬಿ ಗೌಡ. ‘ಪ್ರೇಮಮ್ ಪೂಜ್ಯಮ್’ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ಇದೇ ಫೆಬ್ರವರಿ 24ರಂದು ರಾಜ್ಯದಾದ್ಯಂತ ಬೆಳ್ಳಿತೆರೆಯ ಮೇಲೆ ಬಿಡುಗಡೆಯಾಗುತ್ತಿದೆ. ಈ ಸಂಧರ್ಭ ಚಿತ್ರದ ಕಲಾವಿದರು ತಮ್ಮ ಸಿನಿಮಾದ ಬಗ್ಗೆ ಒಂದೆರಡು ಮಾತನಾಡಿದ್ದಾರೆ.
“ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗು ಟ್ರೈಲರ್ ನಿಂದ ನಮ್ಮ ‘ಜೂಲಿಯೆಟ್ 2’ ಸಿನಿಮಾ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಅಪ್ಪ-ಮಗಳ ನಡುವಿನ ಸನ್ನಿವೇಶಗಳು ಯಾರೆ ಆದರೂ ಒಮ್ಮೆಲೆ ಭಾವುಕರಾಗುವಂತೆ ಮೂಡಿಬಂದಿವೆ. ಪಶ್ಚಿಮ ಘಟ್ಟವನ್ನ ಸೇರುವ ಬೆಳ್ತಂಗಡಿ ಸಮೀಪದ ಕಾಡೊಂದರಲ್ಲೇ ಬಹುಪಾಲು ಚಿತ್ರೀಕರಣ ಮಾಡಿರುವುದರಿಂದ ಕಂಗಳಿಗೂ ಕೂಡ ಈ ಸಿನಿಮಾ ಮೂಡನೀಡಲಿದೆ ” ಎಂದು ನಿರ್ದೇಶಕರಾದ ವಿರಾಟ್ ಬಿ ಗೌಡ ಅವರು ಹೇಳಿದರೆ, ನಾಯಕಿ ಬೃಂದಾ ಆಚಾರ್ಯ, “ಈ ಕಥೆಯಲ್ಲಿ ನನ್ನ ಪಾತ್ರದ ಹೆಸರೇ ‘ಜೂಲಿಯೆಟ್’. ನಿರ್ದೇಶಕರು ಕಥೆ ಹೇಳಿದಾಗಲೇ ನನಗೆ ತುಂಬ ಇಷ್ಟವಾಯಿತು. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಮಹಿಳಾ ಸಾಮರ್ಥ್ಯವನ್ನ ಸಾರುವಂತಹ ಚಿತ್ರ. ಇದರಲ್ಲಿನ ಹಲವು ಭಾವನಾತ್ಮಕ ಸನ್ನಿವೇಶಗಳು ಮನಸೆಳೆಯುತ್ತವೆ. ಇನ್ನು ಕಾಡಿನ ನಡುವೆ ನಡೆದಂತಹ ಚಿತ್ರೀಕರಣ ಒಂದು ರೀತಿಯ ಮರೆಯಲಾಗದ ಅನುಭವವೇ ಸರಿ. ನಾವು ಬೆವರು ಮಾತ್ರವಲ್ಲದೆ ರಕ್ತವನ್ನು ಸುರಿಸಿ ಈ ಸಿನಿಮಾ ಮಾಡಿದ್ದೇವೆ ಎನ್ನಬಹುದು. ಏನೇ ಆದರೂ ಇದೊಂದು ಒಳ್ಳೆಯ ಅನುಭವ ಹಾಗೆಯೇ ಖಂಡಿತವಾಗಿ ಒಂದೊಳ್ಳೆ ಸಿನಿಮಾ” ಎನ್ನುತ್ತಾರೆ.
ಲಿಖಿತ್ ಆರ್ ಕೋಟ್ಯಾನ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಸಚಿನ್ ಬಸ್ರುರ್ ಅವರ ಸಂಗೀತ ಹಾಗು ಶಾಂಟೋ ವಿ ಆಂಟೊ ಅವರ ಛಾಯಾಗ್ರಾಹಣ ಕಾಣಸಿಗಲಿದೆ. ನಾಯಕಿ ಬೃಂದಾ ಆಚಾರ್ಯ ಅವರ ಜೊತೆಗೆ ಶ್ರೀಕಾಂತ್, ರಾಯ್, ಖುಷ್ ಆಚಾರ್ಯ, ಅನೂಪ್ ಸಾಗರ್, ರವಿ ಮುಂತಾದವರು ಈ ಕಥೆಯ ಪಾತ್ರಗಳಿಗೆ ಜೀವತುಂಬಿದ್ದಾರೆ. ಈಗಾಗಲೇ ಸಿನಿಮಾದ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಹೆಚ್ಚೇಚ್ಚು ವೀಕ್ಷಣೆ ಪಡೆಯುತ್ತಿದೆ. ಇದೇ ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗಲಿದೆ.



