HomeNewsಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾರುವ ಹೊಸ ಚಿತ್ರ 'ಜೂಲಿಯೆಟ್ 2'! ಹೇಗಿದೆ ಸಿನಿಮಾ?

ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾರುವ ಹೊಸ ಚಿತ್ರ ‘ಜೂಲಿಯೆಟ್ 2’! ಹೇಗಿದೆ ಸಿನಿಮಾ?

ನಮ್ ಟಾಕೀಸ್ ರೇಟಿಂಗ್ 【 3.75 / 5 】

ಬದುಕು ಎಂದಾಕ್ಷಣ ಬರೀ ಖುಷಿಗಳೇ ಇರಬೇಕೆಂದೇನಿಲ್ಲ. ಅಲ್ಲಿ ಎದುರಾಗುವ ಸನ್ನಿವೇಶಗಳಿಗೆ ಅದೆಷ್ಟೋ ಭಾರಿ ನಮ್ಮಲ್ಲಿ ಉತ್ತರಗಳೇ ಇರುವುದಿಲ್ಲ. ಅಂತ ಸವಾಲುಗಳನ್ನ ಕಷ್ಟಗಳನ್ನ ಎದುರಿಸಿ ಜಯಿಸಿ ನಿಂತವರಿಗೆ ಇಲ್ಲಿ ಬದುಕಲು ಸಾಧ್ಯ. ಈ ವಿಚಾರ ನಾವು ಅಂದಿನಿಂದ ಕೇಳಿ ಕಂಡು ಬಂದಿರುವಂತದ್ದು. ಅದರಲ್ಲೂ ಒಬ್ಬ ಮಹಿಳೆಯಾದರೆ, ಅವಳ ಬದುಕು ಕಾಣುವ ಕಷ್ಟಗಳಿಗೆ ಲೆಕ್ಕವೇ ಇರುವುದಿಲ್ಲ. ಆದರೆ ಇದಕ್ಕೆಲ್ಲ ಅಂಜುವ ಮಹಿಳೆ ಅಬಲೆಯಲ್ಲ. ಅವಳು ಕೂಡ ಎಲ್ಲವನ್ನ ಎದುರಿಸಿ ನಿಲ್ಲಬಲ್ಲಳು, ಧೈರ್ಯದಿಂದ ಎದುರಿಸಬಲ್ಲಳು ಎಂದು ತೋರಿಸಲು ಈ ವಾರ ತೆರೆಗೆ ಬಂದಂತಹ ಸಿನಿಮಾ ವಿರಾಟ್ ಬಿ ಗೌಡ ಅವರ ನಿರ್ದೇಶನದ ಬೃಂದಾ ಆಚಾರ್ಯ ಅವರು ನಾಯಕಿಯಾಗಿ ನಟಿಸಿರುವ ‘ಜೂಲಿಯೆಟ್ 2’. ಹಾಗಾದರೆ ಸಿನಿಮಾ ಹೇಗಿದೆ?

ಬಾಲ್ಯದಿಂದಲೂ ಅಪಾರ ನೋವನ್ನು ಕಂಡುಕೊಂಡು ಬಂದವಳು ನಮ್ಮ ನಾಯಕಿ ಜೂಲಿಯೆಟ್. ಆಕ್ಸಿಡೆಂಟ್ ನಲ್ಲಿ ತಂದೆಯನ್ನ ಕಳೆದುಕೊಂಡದ್ದು, ಅಮ್ಮನ ಅನಾರೋಗ್ಯ, ತನ್ನ ಬಾಲ್ಯದ ನೆನಪುಗಳು ಇದೆಲ್ಲಾ ಅವಳನ್ನು ಸದಾ ಕಾಡುತ್ತಲೇ ಇರುವ ವಿಚಾರಗಳು. ಹೀಗಿರುವಾಗ ಜೂಲಿಯೆಟ್ ಳ ತಂದೆ ನಿಧಾನರಾಗುವಾಗ ಅವಳಿಂದ ಒಂದು ಸಹಾಯ ಕೇಳಿರುತ್ತಾರೆ. ತನ್ನ ಪತ್ನಿ, ಜೂಲಿಯೆಟ್ ಳ ತಾಯಿಯ ಅನಾರೋಗ್ಯದ ಸಮಯದಲ್ಲಿ ಜೂಲಿಯೆಟ್ ಳ ತಂದೆ ತನ್ನ ಸ್ನೇಹಿತರ ಬಳಿಯೇ ಊರಿನಲ್ಲಿದ್ದ ಮನೆಯನ್ನ ಅಡ ಇಟ್ಟಿರುತ್ತಾರೆ. ಹೇಗಾದರೂ ಮಾಡಿ ಆ ಮನೆಯನ್ನ ಮರಳಿ ಪಡೆದುಕೊ ಎಂದು ತಂದೆ ಮಗಳಲ್ಲಿ ಕೇಳಿಕೊಂಡಿರುತ್ತಾರೆ. ಅದೊಂದೇ ಕಾರಣಕ್ಕೆ ಜೂಲಿಯೆಟ್ ಹಣವನ್ನ ಹೊಂದಿಸಿಕೊಂಡು ಊರಿನ ಕಡೆಗೆ ಹೊರಡುತ್ತಾಳೆ. ಆದರೆ ಅಲ್ಲಿ ತಂದೆಯ ಸ್ನೇಹಿತರಾರು ಸಿಗದೇ, ಮ್ಯಾನೇಜರ್ ಸಿಕ್ಕಿ, ಒಂದು ದಿನದ ಮಟ್ಟಿಗೆ ಅವರ ಹಳೆ ಮನೆಯಲಿ ಉಳಿಯಬೇಕಾದ ಪರಿಸ್ಥಿತಿ ಜೂಲಿಯೆಟ್ ಗೆ ಎದುರಾಗುತ್ತದೆ. ಕಾಡಿನ ನಡುವಣ ಒಂಟಿ ಮನೆಯಾಗಿತ್ತು ಅದು. ಅಲ್ಲಿಗೇ ಮ್ಯಾನೇಜರ್ ಹಾಗು ಅವನ ಸಹಾಯಕ ಜೂಲಿಯೆಟ್ ನ ಬಿಟ್ಟು, ಕರೆಂಟ್ ಇಲ್ಲದ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಿಕೊಟ್ಟು ಹೊರಡುತ್ತಾರೆ. ಹೀಗಿರುವಾಗ ಅಲ್ಲಿಗೇ ಬರುವ ಇಬ್ಬರು ದುಷ್ಟರಿಂದ ಜೂಲಿಯೆಟ್ ಗೆ ಏನೆಲ್ಲಾ ಎದುರಿಸಬೇಕಾಗುತ್ತದೆ, ಅವರು ಯಾರು, ಅವರಿಗೂ ಜೂಲಿಯೆಟ್ ಗು ಏನು ಸಂಭಂದ, ಈ ಕಷ್ಟಗಳನ್ನೆಲ್ಲ ಜೂಲಿಯೆಟ್ ಹೇಗೇ ಎದುರಿಸುತ್ತಾಳೆ ಎನ್ನುವುದೇ ಚಿತ್ರದ ಕಥೆ.

ಮಹಿಳಾ ಶಕ್ತಿಯ ಬಗೆಗೆ, ಮಹಿಳೆ ಮನಸ್ಸು ಮಾಡಿದರೆ ಎಂತಹಾ ಕಷ್ಟವೇ ಆದರೂ ಎದುರಿಸಬಲ್ಲಳು ಎಂಬುದನ್ನ ಅದ್ಭುತವಾಗಿ ತಮ್ಮ ಕಥೆಯ ಮೂಲಕ, ಸಿನಿಮಾದ ಮೂಲಕ ತೋರಿಸಿದ್ದಾರೆ ನಿರ್ದೇಶಕರಾದ ವಿರಾಟ್ ಬಿ ಗೌಡ ಅವರು. ಬರುವಂತಹ ಆಕ್ಷನ್ ದೃಶ್ಯಗಳು ನೈಜತೆಯಿಂದ ಕೂಡಿದ್ದು, ತಂದೆ ಮಗಳ ನಡುವಿನ ದೃಶ್ಯಗಳು ಭಾವನಾತ್ಮಕವಾಗಿ ಕಾಡುತ್ತವೆ. ನಾಯಕಿಯಾಗಿ ‘ಪ್ರೇಮಮ್ ಪೂಜ್ಯಮ್’ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ ಅವರು ಬಣ್ಣ ಹಚ್ಚಿದ್ದು, ತಮ್ಮ ಪಾತ್ರಕ್ಕೆ ಯಥಾವತ್ತಾದ ನ್ಯಾಯ ಒದಗಿಸಿದ್ದಾರೆ. ಈ ಪಾತ್ರಕ್ಕೆ ಹಲವು ಆಕ್ಷನ್ ದೃಶ್ಯಗಳು ಕೂಡ ಕೂಡಿದ್ದು, ಅವನ್ನೆಲ್ಲ ಬೃಂದಾ ಅವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಿತ್ರದ ಹಲವು ದೃಶ್ಯಗಳು ಕತ್ತಲೆಯ ಭಾವದಲ್ಲಿ ಚಿತ್ರೀಕರಿಸಲಾಗಿದ್ದು, ಕುತೂಹಲಭರಿತ ಕೌತುಕವನ್ನ ನೋಡುಗನ ಮನಸಿನಲ್ಲಿ ತುಂಬುತ್ತದೆ. ಸಂದೀಪ್ ಹಾಗು ರಜತ್ ಅವರ ಸಂಗೀತ ಕೂಡ ಗಮನ ಸೆಳೆಯುವಂತದ್ದೇ. ನಾಯಕಿ ಬೃಂದಾ ಆಚಾರ್ಯ ಅವರ ಜೊತೆಗೆ ಅನೂಪ್ ಸಾಗರ್, ಕುಶ್ ಆಚಾರ್ಯ, ಶ್ರೀಕಾಂತ್, ರಾಯ್ ಬಡಿಗೇರ್ ಮುಂತಾದ ನಟರು ಕೂಡ ತಮ್ಮ ಪಾತ್ರವನ್ನ ಅತೀ ಸುಂದರವಾಗಿ ನಿಭಾಯಿಸಿದ್ದಾರೆ. ಛಾಯಾಗ್ರಾಹಕ ಶೇಂಟೋ ವಿ ಅಂಟೋ ಅವರಿಗೂ ಹಾಗು ಇಂತಹ ಥ್ರಿಲರ್ ಸಿನಿಮಾದ ಮೇಲೆ ಭರವಸೆ ಇಟ್ಟು ಬಂಡವಾಳ ಹೂಡಿರುವ ನಿರ್ಮಾಕರಾದ ಲಿಖಿತ ಆರ್ ಕೋಟ್ಯಾನ್ ಅವರಿಗೆ ಪ್ರಶಂಸೆ ಸಲ್ಲಿಸಲೇಬೇಕಾದದ್ದು.

ಒಟ್ಟಿನಲ್ಲಿ ಮನೆಮಂದಿಯೆಲ್ಲಾ ಕೂತು ನೋಡಬಹುದಾದಂತಹ ಒಂದೊಳ್ಳೆ ಭಾವನಾತ್ಮಕ ಥ್ರಿಲರ್ ಸಿನಿಮಾವನ್ನ ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ. ಫೆಬ್ರವರಿ 24ರಂದು ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ, ಸಿನಿಪ್ರೇಮಿಗಳ ಉತ್ತಮ ಪ್ರಶಂಸೆಯ ಜೊತೆಗೇ ಸಿನಿಮಾ ನೋಡಲು ಸಿಗುತ್ತಿದೆ.

RELATED ARTICLES

Most Popular

Share via
Copy link
Powered by Social Snap