ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಕುಟುಂಬದ ಕುಡಿಯೊಂದು ಇದೀಗ ಸಿನಿಮಾರಂಗದತ್ತ ಹೆಜ್ಜೆ ಹಾಕುತ್ತಿದೆ. ಈಗಾಗಲೇ ಬಾರೀ ಸದ್ದು ಮಾಡುತ್ತಿರುವ ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರ ಮೊದಲ ಸಿನಿಮಾ ‘ಜಿಮ್ಮಿ’ಯ ಫಸ್ಟ್ ಲುಕ್ ಬಿಡುಗಡೆ ಇಂದು ಏರ್ಪಾಡಾಗಿತ್ತು. ಅದರಂತೆ ಇದೀಗ ‘ಜಿಮ್ಮಿ’ಯ ಮೊದಲ ನೋಟ ಹೊರಬಿದ್ದಿದೆ. ಜೂನಿಯರ್ ಕಿಚ್ಚ ಎಂದೇ ಕರೆಸಿಕೊಳ್ಳುತ್ತಿರುವ ಸಂಚಿತ್ ಸಂಜೀವ್ ಅವರು ನಟನೆ ಮಾತ್ರವಲ್ಲದೇ ತಮ್ಮ ಚೊಚ್ಚಲ ಸಿನಿಮಾದಲ್ಲಿಯೇ ನಟನೆ ನಿರ್ದೇಶನ ಎರಡೂ ಮಾಡಲಿದ್ದಾರೆ.


‘ಜಿಮ್ಮಿ’ ಒಂದು ಪಕ್ಕ ಆಕ್ಷನ್ ಇರುವ, ಮಾಸ್ ಗ್ಯಾಂಗ್ ಸ್ಟರ್ ಸಿನಿಮಾ ಎಂಬುದನ್ನು ಬಿಡುಗಡೆಯಾಗಿರುವ ಅದರ ಮೊದಲ ನೋಟದ ಝಲಕ್ ಹೇಳುತ್ತಿದೆ. ಜಿಮ್ಮಿಯ ಪಾತ್ರದ ಪರಿಚಯ ನೀಡುವ ಝಲಕ್ ವಿಡಿಯೋ ಇದಾಗಿದ್ದು, ಪಕ್ಕ ಮಾಸ್ ಲುಕ್ ನಲ್ಲಿ, ಖಡಕ್ ನಡಿಗೆ, ನೋಟ ಹಾಗು ಡೈಲಾಗ್ ಡೆಲಿವರಿಯ ಜೊತೆಗೆ ಕನ್ನಡಿಗರನ್ನ ಮೆಚ್ಚಿಸುತ್ತಿದ್ದಾರೆ ಸಂಚಿತ್.


ಸಂಚಿತ್ ಅವರೇ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನ ಲಹರಿ ಫಿಲಂಸ್ ಹಾಗು ಕೆ ಪಿ ಶ್ರೀಕಾಂತ್ ಅವರ ‘ವೀನಸ್ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಮಾಡಲಾಗುತ್ತಿದೆ. ಈಗ ಬಿಡಲಾಗಿರುವ ಟೀಸರ್ ನಲ್ಲಿ ಬರುವ ಹಿನ್ನೆಲೆ ಹಾಡನ್ನು ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಅವರೇ ಹಾಡಿರುವುದು ವಿಶೇಷ. ವಾಸುಕಿ ವೈಭವ್ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದಾರೆ.
ಜಿಮ್ಮಿ ಪಾತ್ರದ ಝಲಕ್ ವಿಡಿಯೋ ಬಿಡುಗಡೆ ಕಾರ್ಯಕ್ರಮವನ್ನ ಅದ್ದೂರಿಯಾಗಿ ಮಾಡಲಾಯಿತು. ಚಿತ್ರರಂಗದ ಗಣ್ಯ ನಟರುಗಳಾದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಹಾಗು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ನಾಯಕ ನಿರ್ದೇಶಕ ಸಂಚಿತ್ ಅವರನ್ನ ಕೈ ಹಿಡಿದು ಕರೆದುಕೊಂಡು ಬಂದಿದ್ದು ವಿಶೇಷ. ಅನುಶ್ರೀ ಅವರು ಕಾರ್ಯಕ್ರಮ ನಡೆಸಿಕೊಟ್ಟರೆ, ಕಿಚ್ಚ ಸುದೀಪ್ ಹಾಗು ಕುಟುಂಬ, ಆರ್ ಚಂದ್ರು, ಗುರುಕಿರಣ್ ,ಮುಂತಾದ ಹೆಸರಾಂತ ಕಲಾವಿದರು ಈವೇಳೆ ಗೆ ಬಂದು ತಂಡವನ್ನ ಹರಸಿದರು. ಮಾತನಾಡುತ್ತಾ ಕಿಚ್ಚ ಸುದೀಪ್ ಅವರು, “ಹಿಂದೆ ಅಪಾರ ಸ್ಟಾರ್ ಗಳು ಈ ಕನ್ನಡ ಸಿನಿಮಾರಂಗವನ್ನ ಉಳಿಸಿಕೊಂಡು ಬಂದಿದ್ದಾರೆ. ಮುಂದೆ ನೀವು ತೆಗೆದುಕೊಂಡು ಹೋಗಬೇಕು. ಯಾವುದೇ ಗಲಾಟೆ ಇಲ್ಲದೆ, ಎಲ್ಲರ ಜೊತೆಗೆ ಸ್ನೇಹದಿಂದ ಇರಬೇಕು” ಎಂಬ ಬುದ್ದಿಮಾತುಗಳನ್ನ ಸಂಚಿತ್ ಅವರಿಗೆ ಹೇಳಿದರು.



