ತಮಿಳಿನಲ್ಲಿ ‘ಬಿಗಿಲ್’,’ಮೆರ್ಸಲ್’ನಂತಹ ಹಿಟ್ ಸಿನಿಮಾಗಳನ್ನ ನೀಡಿದ ನಿರ್ದೇಶಕ ಅಟ್ಲಿ ಅವರ ಜೊತೆಗೆ ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಖಾನ್ ಅವರು ಮಾಡುತ್ತಿರುವ ಹೊಸ ಸಿನಿಮಾ ‘ಜವಾನ್’ ಇದೀಗ ಬಿಡುಗಡೆಗೆ ಸಿದ್ದವಾಗಿ ನಿಂತಿದೆ. ಎಲ್ಲೆಡೆ ಬಾರೀ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ‘ಪ್ರಿವ್ಯೂ’ ಎಂಬ ವಿಶೇಷ ವಿಡಿಯೋ ಟೀಸರ್ ಅನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಸದ್ಯ ಎಲ್ಲೆಡೆ ಬಾರೀ ಸದ್ದು ಮಾಡುತ್ತಾ, ಸಿನಿಪ್ರೇಮಿಗಳ ಮನಗೆಲ್ಲುತ್ತಾ ಸಾಗುತ್ತಿದೆ ಈ ‘ಜವಾನ್’ ಪ್ರಿವ್ಯೂ. ‘ಪಥಾನ್’ ಸಿನಿಮಾದ ಮೂಲಕ ಮತ್ತೆ ಗೆಲುವಿನ ಹಾದಿಹಿಡಿದಿರುವ ಶಾರುಖ್ ಖಾನ್ ಅವರಿಗೆ ‘ಜವಾನ್’ ಮತ್ತೊಂದು ದೊಡ್ಡ ಮಟ್ಟದ ಗೆಲುವು ನೀಡಲಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.


ಸಮಾಜದಲ್ಲಾಗುವ ತಪ್ಪುಗಳನ್ನ ತಿದ್ದಲು ಒಬ್ಬ ಜವಾಬ್ದಾರಿಯುತ, ಪ್ರಾಯಶಃ ಸೈನ್ಯಕ್ಕೆ ಸೇರಿದ್ದಂತವನೊಬ್ಬ ಹೋರಾಡುವಂತಹ ಆಕ್ಷನ್ ಭರಿತ ಕಥೆ ‘ಜವಾನ್’ ಸಿನಿಮಾದ್ದು. ಕೆಲವು ಪೋಸ್ಟರ್ ಹಾಗು ಚಿಕ್ಕ ಪುಟ್ಟ ಟೀಸರ್ ಗಳನ್ನಷ್ಟೇ ಈವರೆಗೆ ನೀಡಿದ್ದ ‘ಜವಾನ್’ ಚಿತ್ರತಂಡ ಇದೀಗ ಈ ‘ಪ್ರಿವ್ಯೂ’ನಿಂದ ಸಿನಿಮಾ ಎಷ್ಟು ವೈಭವವಾಗಿ ಇರಲಿದೆ ಎಂಬುದನ್ನ ತೋರಿಸಿದೆ. ಮೂರು ವಿಭಿನ್ನ ಶೇಡ್ ಗಳಲ್ಲಿ ಶಾರುಖ್ ಕಾಣಿಸಿಕೊಳ್ಳಲಿದ್ದು, ಹಿಂದೆಂದೂ ಕಾಣದ ಒಂದು ಲುಕ್ ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಕೂಡ ಟೀಸರ್ ತಿಳಿಸಿದೆ. ಇವರಷ್ಟೇ ಅಲ್ಲದೇ ದೊಡ್ಡ ತಾರಾಗಣವೇ ಸಿನಿಮಾದಲ್ಲಿದೆ. ನಯನತಾರ, ವಿಜಯ್ ಸೇತುಪತಿ, ವಿಶೇಷ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ಸಾನ್ಯಾ ಮಲ್ಹೋತ್ರ, ಲೆಹರ್ ಖಾನ್, ಆಲಿಯಾ ಖುರೇಶಿ ಮುಂತಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


ಶಾರುಖ್ ಖಾನ್ ಅವರ ಒಡೆತನದ ರೆಡ್ ಚಿಲ್ಲಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಅವರು ಈ ಸಿನಿಮಾ ನಿರ್ಮಿಸುತ್ತಿದ್ದು, ಭರ್ಜರಿ ಆಕ್ಷನ್ ದೃಶ್ಯಗಳ ಜೊತೆಗೆ ದೊಡ್ಡ ಮಟ್ಟದಲ್ಲಿ ಸಿನಿಮಾದ ಸಿದ್ಧವಾಗಿದೆ. ಅಟ್ಲಿ ನಿರ್ದೇಶನ, ದಕ್ಷಿಣದ ಪ್ರಖ್ಯಾತ ಸಂಗೀತ ನಿರ್ದೇಶಕ ಅನಿರುಧ್ ರವಿಚಂದರ್ ಅವರ ಸಂಗೀತ ಸಿನಿಮಾದ ಮತ್ತುಳಿದ ಪ್ರಮುಖ ಅಂಶಗಳು. ಇದೇ ಸೆಪ್ಟೆಂಬರ್ 7ರಂದು ಸಿನಿಮಾದ ಇಡೀ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಸದ್ಯ ಬಿಡುಗಡೆಯಾಗಿರುವ ‘ಪ್ರಿವ್ಯೂ’ ಚಿತ್ರದ ಬಗೆಗಿನ ನಿರೀಕ್ಷೆಗಳನ್ನ ಹೆಚ್ಚಿಸುತ್ತಿದೆ.



