ಕನ್ನಡದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಕನ್ನಡಿಗರಿಗೆ ಚಿರಪರಿಚಿತ ನಟರು. ಹಾಸ್ಯ, ಆಕ್ಷನ್, ಸೆಂಟಿಮೆಂಟ್ ಈ ರೀತಿ ಹಲವು ರೀತಿಯ ಪಾತ್ರಗಳನ್ನು, ಹಲವು ಹಿಟ್ ಸಿನೆಮಾಗಳನ್ನು ಮಾಡಿರುವ ಕೀರ್ತಿ ಪ್ರಜ್ವಲ್ ಅವರದ್ದು. ಇದೀಗ ಪ್ರಜ್ವಲ್ ಅವರು ತಮ್ಮ ವೃತ್ತಿಜೀವನದ ಮೊದಲ ಪಾನ್ ಇಂಡಿಯನ್ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಇದೀಗ ಈ ಸಿನಿಮಾದ ಶೀರ್ಷಿಕೆ ಅನಾವರಣಗೊಂಡಿದ್ದು, ಕನ್ನಡದ ಜೊತೆಗೆ ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂ ಭಾಷೆಗಳನ್ನು ಸೇರಿ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ‘ಜಾತರೆ’ ಎಂದು ಹೆಸರಿಡಲಾಗಿದೆ. ದೊಡ್ಡ ಮಟ್ಟದ ಬಜೆಟ್ ನಲ್ಲಿ ತಯಾರಗುತ್ತಿರುವ ಈ ಹೊಸ ಸಿನಿಮಾದಲ್ಲಿ ಪ್ರಜ್ವಲ್ ಅವರು ಹಿಂದೆಂದೂ ಕಾಣದ ಲುಕ್ ನಲ್ಲಿ ತೆರೆಮೇಲೆ ಬರಲಿದ್ದಾರೆ ಎನ್ನಲಾಗುತ್ತಿದೆ.


ಹೈದರಬಾದ್ ಮೂಲದ ವರ್ಧಮಾನ್ ಫಿಲಂಸ್ ಹಾಗೂ ಲೋಟಸ್ ಎಂಟರ್ ಟೈನ್ ಮೆಂಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗುತ್ತಿರುವ ಈ ಪಾನ್ ಇಂಡಿಯನ್ ಸಿನಿಮಾವನ್ನ ಗೋವರ್ಧನ್ ರೆಡ್ಡಿ ಅವರು ಬಂಡವಾಳ ಹೂಡುತ್ತಿದ್ದಾರೆ. ತೆಲುಗು ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಉದಯ ನಂದನವನಂ ಅವರು ಈ ‘ಜಾತರೆ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಈ ಹೊಸ ಸಿನಿಮಾಗೆ ಭೀಮ್ಸ್ ಸೆಸಿರೋಲಿಯೋ ಅವರ ಸಂಗೀತ, ಸಾಯಿಶ್ರೀರಾಂ ಅವರ ಛಾಯಾಗ್ರಹಣ, ಬಿ.ವಾಸುದೇವರೆಡ್ಡಿ ಅವರ ಕಥೆ ಇದ್ದು, ಈಗಾಗಲೇ ತಮ್ಮ ಡೈಲಾಗ್ ಗಳಿಂದ ಪ್ರಖ್ಯಾತಿ ಪಡೆದಿರುವ ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.
ಸದ್ಯ ಅಧಿಕೃತ ಘೋಷಣೆ ಮಾಡಿರುವ ಚಿತ್ರತಂಡ, ಈ ವರ್ಷದ ಆಗಸ್ಟ್ ನಲ್ಲಿ ಚಿತ್ರೀಕರಣ ಆರಂಭಿಸಿ, ಮುಂದಿನ ವರ್ಷದ ಸಂಕ್ರಾಂತಿ ವೇಳೆ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಸಿನಿಮಾದ ನಾಯಕಿ ಹಾಗು ಇತರ ಕಲಾವಿದರಿಗೆ ತಂಡದವರು ಅನ್ವೇಷಣೆಯಲ್ಲಿದ್ದಾರೆ.

