ಭಾರತ – ಶ್ರೀಲಂಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 4 ವಿಕೆಟ್ ಗಳಿಂದ ಗೆದ್ದುಕೊಂಡು ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 215 ರನ್ ಗಳಿಸಿ ಸರ್ವಪತನ ಕಂಡಿತು. ನುವನಿಡು ಫೆರ್ನಾಂಡೊ 50, ಕುಸಾಲ್ ಮೆಂಡಿಸ್ 34, ವೆಲ್ಲಲಾಗೆ 32 ರನ್ ಗಳಿಸಿದರು. ಉಳದವರು ಕನಿಷ್ಟ ಮೊತ್ತಗಳಿಸಿ ಪೆವಿಲಿಯನ್ ಸಾಗಿದರು.
ಭಾರತದ ಪರವಾಗಿ ಸಿರಾಜ್, ಕುಲ್ ದೀಪ್ ಯಾದವ್ ತಲಾ 3 ವಿಕೆಟ್ ಪಡೆದರೆ, ಉಮ್ರಾನ್ ಮಲಿಕ್ 2, ಅಕ್ಷರ್ 1 ವಿಕೆಟ್ ಪಡೆದು ಮಿಂಚಿದರು.
216 ರನ್ ಗಳ ಸವಾಲನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ರೋಹಿತ್ ಶರ್ಮಾ (17), ಗಿಲ್ (21 ) ವಿಕೆಟ್ ಕಳೆದುಕೊಂಡಿತು. ಆ ಬಳಿಕ ಕಳೆದ ಪಂದ್ಯದಲ್ಲಿ ಶತಕ ಸಿಡಿಸಿದ ಕೊಹ್ಲಿ ಈ ಪಂದ್ಯದಲ್ಲಿ ಬರೀ 4 ರನ್ ಗಳಿಸಿ ಔಟಾದರು. ಶ್ರೇಯಸ್ ಅಯ್ಯರ್ 28 ರನ್ ಗಳಿಸಿ ಕೆಲ ಕಾಲ ತಂಡಕ್ಕೆ ಆಸರೆಯಾದರು. ಕೆಎಲ್ ರಾಹುಲ್ 64 ರನ್ ಗಳಿಸಿ ತಂಡದ ಗೆಲುವಿಗೆ ಶ್ರಮಿಸಿದರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ (36), ಅಕ್ಷರ್ (21) ರನ್ ಗಳಿಸಿ ತಂಡ ಗೆಲುವಿಗೆ ಸಹಕರಿಸಿದರು.

