‘ನಟರಾಕ್ಷಸ’ ಎಂದೇ ಖ್ಯಾತರಾದ ಡಾಲಿ ಧನಂಜಯ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವುದು ಗೊತ್ತಿರುವ ವಿಚಾರ. ಸದ್ಯ ಬಿಡುಗಡೆಗೆ ಸಿದ್ದವಾಗಿರೋ ಇವರ ಮುಂದಿನ ಸಿನಿಮಾ ಅಂದರೆ ಅದು ‘ಹೊಯ್ಸಳ’. ಇದು ಡಾಲಿ ಅವರ 25ನೇ ಸಿನಿಮಾ ಕೂಡ ಹೌದು. ಹಾಗಾಗಿ ಈ ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಇದೇ ಮಾರ್ಚ್ 31ರಂದು ‘ಹೊಯ್ಸಳ’ ಸಿನಿಮಾ ಬಿಡುಗಡೆಯಗುವುದಾಗಿ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಸಿನಿಮಾದ ಹಾಡುಗಳನ್ನು ಒಂದೊಂದಾಗಿ ಬಿಡುಗಡೆ ಮಾಡುತ್ತಿರುವ ಚಿತ್ರತಂಡ, ತಮ್ಮ ಎರಡನೇ ಹಾಡಿನ ಬಿಡುಗಡೆಯ ದಿನಾಂಕವನ್ನ ಹೊರಹಾಕಿದ್ದಾರೆ.
ಈ ಸಿನಿಮಾದ ಮೊದಲ ಹಾಡು, ‘ದಿ ಸ್ವಾಗ್ ಓಫ್ ಹೊಯ್ಸಳ’ ಈಗಾಗಲೇ ಬಿಡುಗಡೆಯಾಗಿ ಎಲ್ಲರ ಮನಗೆದ್ದಿದೆ. ಇದೀಗ ಬಿಡುಗಡೆಯಾಗುತ್ತಿರುವ ಎರಡನೇ ಹಾಡು, ‘ಅರ್ರೆ ಇದು ಎಂಥ ಭಾವನೆ’. ಈ ಹಾಡಿಗೆ ಯೋಗರಾಜ್ ಭಟ್ ಅವರ ಸಾಹಿತ್ಯ ಇದ್ದು, ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಅವರಿಂದ ಮೂಡಿಬಂದ ಒಂದೊಳ್ಳೆ ಮೆಲೋಡಿ ಹಾಡು ಇದಾಗಿರಲಿದೆಯಂತೆ. ಹರಿಚರಣ್ ಈ ಹಾಡಿಗೆ ದನಿ ನೀಡಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋ ಇದೇ ಮಾರ್ಚ್ 8ನೇ ತಾರೀಕು ಮಧ್ಯಾಹ್ನ 12:34ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡ ಹೊಸದೊಂದು ಪೋಸ್ಟರ್ ಹೊರಹಾಕುವ ಮೂಲಕ ಈ ವಿಚಾರ ಹಂಚಿಕೊಂಡಿದೆ. ತಮ್ಮ ಪ್ರೇಮಗೀತೆಗಳಿಗೆ ಹೆಸರಾಗಿರುವ ಅಜನೀಶ್ ಅವರಿಂದ ಇನ್ನೊಂದು ಸುಮಧುರ ಗೀತೆಯ ನಿರೀಕ್ಷೆಯಲ್ಲಿ ಸಿನಿಪ್ರೇಮಿಗಳಿದ್ದಾರೆ.
ವಿಜಯ್ ಎನ್ ಅವರು ಬರೆದು, ನಿರ್ದೇಶಿಸಿರುವ ‘ಹೊಯ್ಸಳ’ ಸಿನಿಮಾ ಕೆ ಆರ್ ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಕೆ ಆರ್ ಜಿ ಹಾಗೂ ಡಾಲಿ ಅವರ ಜೋಡಿಯಲ್ಲಿ ಬಂದಂತಹ ‘ರತ್ನನ್ ಪ್ರಪಂಚ’ ಸಿನಿಮಾ ಜನಮಾನಸದಲ್ಲಿ ಉಳಿದಿರುವ ಕಾರಣದಿಂದಲೇ ಈ ಸಿನಿಮಾ ಕೂಡ ಅಭಿಮಾನಿಗಳು ನಿರೀಕ್ಷೆ ಇಟ್ಟಿರುವ ಸಿನಿಮಾಗಳಲ್ಲಿ ಒಂದಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವುದರಿಂದ ಹಾಡುಗಳ ಬಗ್ಗೆಯೂ ನಿರೀಕ್ಷೆ ಇರುವುದು ಸಾಮಾನ್ಯ.

