ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಸುದ್ದಿಗಳಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದ, ಹೊಸ ಯುವ ಪ್ರತಿಭೆಗಳನ್ನ ಒಳಗೊಂಡಂತಹ ಈ ಸಿನಿಮ ತನ್ನ ಪ್ರಚಾರ ಕಾರ್ಯಗಳಿಂದ ಎಲ್ಲೆಡೆ ಜನಪ್ರಿಯತೆ ಗಳಿಸಿತ್ತು. ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ ಸೇರಿದಂತೆ ಸ್ಟಾರ್ ನಟರುಗಳಿಂದ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿಸುತ್ತ, ಪ್ರಚಾರದ ವಿಭಿನ್ನ ವಿಡಿಯೋಗಳನ್ನ ಮಾಡುತ್ತಾ ಜನರಿಗೆ ಹತ್ತಿರವಾದ ಹಾಸ್ಟೆಲ್ ಹುಡುಗರು, ಅವರೇ ಗಳಿಸಿಕೊಂಡ ಅವರ ಸಿನಿಮಾ ಪ್ರೇಮಿಗಳನ್ನ ಚಿತ್ರಮಂದಿರಗಳಲ್ಲಿ ಭೇಟಿಯಾಗುವ ಕಾಲ ಕೂಡ ಹತ್ತಿರವಾಗುತ್ತಿದೆ. ಇದೇ ಜುಲೈ 21ರಿಂದ ಎಲ್ಲೆಡೆ ಚಿತ್ರಮಂದಿರಗಳಲ್ಲಿ ಭರ್ಜರಿ ಬಿಡುಗಡೆ ಕಾಣಲಿರುವ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದಿಂದ ಟೀಸರ್ ಬಿಡುಗಡೆಯ ದಿನಾಂಕ ಹೊರಬಿದ್ದಿದೆ.


ಸುಮಾರು ಎರಡು ವರ್ಷಗಳಿಂದ ಮುಖ್ಯಭೂಮಿಕೆಯಲ್ಲಿದ್ದಂತಹ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಯಾವಾಗ ತೆರೆಯ ಮೇಲೆ ಬರಲಿದೆ ಎಂದು ಪ್ರತಿಯೊಬ್ಬರೂ ಕಾಯುವಂತೆ ಮಾಡಿತ್ತು. ತಮ್ಮ ಅದೇ ವಿಭಿನ್ನ ವಿಡಿಯೋದ ಮೂಲಕ ಬಿಡುಗಡೆ ದಿನಾಂಕವನ್ನ ಹೊರಹಾಕಿದ ಚಿತ್ರತಂಡ ಇದೀಗ ತನ್ನ ಟೀಸರ್ ಅನ್ನು ಇದೇ ಶನಿವಾರ, ಜುಲೈ 7ರ ಬೆಳಿಗ್ಗೆ 11:30ಕ್ಕೆ ಬಿಡಲು ತಯಾರಾಗಿದೆ. ಚಿತ್ರಕ್ಕೆ ರಕ್ಷಿತ್ ಶೆಟ್ಟಿಯವರ ಪರಂವಾಹ್ ಸ್ಟುಡಿಯೋಸ್ ಕೂಡ ಸಾಥ್ ನೀಡುತ್ತಿದ್ದು, ಸದ್ಯ ನಾಳೆ ಬೆಳಿಗ್ಗೆ 11:30ಕ್ಕೆ ‘A2 ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆಯಾಗಲಿದೆ. ಹೊಟ್ಟೆ ಹುಣ್ಣಾಗುವಷ್ಟು ನಗಲು ಎಲ್ಲರೂ ತಯಾರಾ?
ಗುಲ್ಮೋಹರ್ ಫಿಲಂಸ್ ಹಾಗು ವರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಸಿದ್ದವಾದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ 500ಕ್ಕೂ ಹೆಚ್ಚು ಪ್ರತಿಭಾನ್ವಿತ ಕಲಾವಿದರು ನಟಿಸಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ರಿಷಬ್ ಶೆಟ್ಟಿ ಶೈನ್ ಶೆಟ್ಟಿ, ಮುಂತಾದವರು ಕೂಡ ನಟಿಸಿದ್ದಾರೆ ಎನ್ನಲಾಗುತ್ತಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ ಚಿತ್ರದಲ್ಲಿದೆ. ಜೀ ಸ್ಟುಡಿಯೋಸ್ ಈ ಸಿನಿಮಾವನ್ನ ಎಲ್ಲೆಡೆ ಬಿಡುಗಡೆ ಮಾಡಲಿದೆ. ಇದೇ ಜುಲೈ 21ಕ್ಕೆ ಬಿಡುಗಡೆಯಾಗಲಿರುವ ಚಿತ್ರದ ಟೀಸರ್ ನಾಳೆ ನಿಮ್ಮ ಮುಂದೆ

