ಇಡೀ ಕರುನಾಡಿನ ಸಿನಿಪ್ರೇಕ್ಷಕರಲ್ಲಿ ನಿರೀಕ್ಷೆಗಳ ಪರ್ವತವನ್ನೇ ಸೃಷ್ಟಿಸಿ, ಕಳೆದ ಶುಕ್ರವಾರ, ಅಂದರೇ ಜುಲೈ 21ಕ್ಕೆ ಎಲ್ಲೆಡೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ತೆರೆಕಂಡಲ್ಲೆಲ್ಲ ಹೌಸ್ ಫುಲ್ ಬೋರ್ಡ್ ಹಾಕಿಕೊಳ್ಳುತ್ತಾ, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ ನಮ್ಮ ಹಾಸ್ಟೆಲ್ ಹುಡುಗರ ಸಿನಿಮಾ. ಇದೀಗ ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ವಿದೇಶದಲ್ಲೂ ಬಿಡುಗಡೆಯಾಗಲು ಸಿದ್ದವಾಗುತ್ತಿದೆ.
ಒಂದು ಹಾಸ್ಟೆಲ್ ನಲ್ಲಿ ನಡೆವ ತರತರದ ತರಲೆಗಳನ್ನ ತೆರೆಯ ಮೇಲೆ ತಂದಂತಹ ಸಂಪೂರ್ಣ ಹಾಸ್ಯದ ರಸದೌತಣ ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ ಕನ್ನಡ ಸಿನಿಮಾಗಳಲ್ಲಿ ಒಂದು ಹೊಸತನದ ಸಿನಿಮಾ ಎಂದೆಂಸಿಕೊಳ್ಳುತ್ತಿದೆ. ಸದ್ಯ ಈ ಸಿನಿಮಾ ಹೊರದೇಶಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ಹಾಗು ನಟ ನಿತಿನ್ ಕೃಷ್ಣಮೂರ್ತಿ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.


ಕನ್ನಡಿಗರಿಂದ ತಯಾರಾದ ಈ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ಕಿಚ್ಚು ಇದೀಗ ಇಡೀ ಪ್ರಪಂಚಕ್ಕೆ ತಲುಪುತ್ತಿದೆ. ಅದರಂತೆ ಅಮೇರಿಕಾ, ಕೆನಡಾ, ದಕ್ಷಿಣ ಆಫ್ರಿಕಾ, ಯುರೋಪ್ ಮುಂತಾದ ರಾಷ್ಟ್ರಗಳಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತೆರೆಗೆ ಬರಲು ಸಜ್ಜಾಗಿದೆ. ಈ ಎಲ್ಲಾ ಕಡೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿರುವ ಚಿತ್ರಮಂದಿರಗಳ ಪಟ್ಟಿಯನ್ನ ನಿತಿನ್ ಹಂಚಿಕೊಂಡಿದ್ದಾರೆ. ಯುರೋಪ್ ನಲ್ಲಿ ಇಂಗ್ಲೆಂಡ್ ಜೊತೆಗೆ ಪೋಲ್ಯಾಂಡ್, ನೆದರ್ಲ್ಯಾಂಡ್, ಜರ್ಮನಿ, ಐರ್ಲ್ಯಾಂಡ್, ಫಿನ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಅಮೇರಿಕಾದಲ್ಲಿ ಹೆಚ್ಚಿನ ಚಿತ್ರಮಂದಿರಗಳು ಇಟ್ಟಿರುವುದು ಮತ್ತೊಂದು ಹಿರಿಮೆ. ಒಟ್ಟಿನಲ್ಲಿ ಕನ್ನಡದ ಸಿನಿಮಾ ಪ್ರಪಂಚದ ವಿವಿಧ ಮೂಲೆಗಳಿಗೆ ತಲುಪುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯೇ ಸರಿ.
ಗುಲ್ಮೋಹರ್ ಫಿಲಂಸ್ ಹಾಗು ವರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಯುವ ಕಲಾವಿದರು ಸೇರಿ ನಿರ್ಮಾಣ ಮಾಡಿರುವ ಈ ಸಿನಿಮಾ ತುಂಬಾ ವಿಶೇಷವಾಗಿ ಮೂಡಿಬಂದಿದೆ. ಅಜನೀಶ್ ಲೋಕನಾಥ್ ಅವರ ಸಂಗೀತ, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಈಗಾಗಲೇ ಜನಮನ ಗೆಲ್ಲುತ್ತಿದೆ. ಇದೀಗ ಸಿನಿಮಾ ವಿದೇಶಗಳಲ್ಲೂ ಬಿಡುಗಡೆಗೆ ಸಿದ್ದವಾಗಿರುವುದು, ಚಿತ್ರತಂಡಕ್ಕೂ, ಖುಷಿ ವಿಚಾರ

