ತಮ್ಮ ಪೋಸ್ಟರ್ ಗಳು, ಸ್ಟಾರ್ ನಟರ ಸಾಥ್, ಜೊತೆಗೆ ಹಾಸ್ಯಮಯ ಪ್ರೊಮೊ ವಿಡಿಯೋಗಳು ಇವೆಲ್ಲದರಿಂದ ಬಾರೀ ಸದ್ದು ಮಾಡಿ, ಕನ್ನಡಿಗರ ಮನದಲ್ಲಿ ನಿರೀಕ್ಷೆಯ ಪರ್ವತ ಸೃಷ್ಟಿಸಿದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ನಾಳೆ, ಜುಲೈ 21ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಚಿತ್ರದ ಟ್ರೈಲರ್ ಹಾಗು ಹಾಡುಗಳು ಬಿಡುಗಡೆಯಾಗಿ ಎಲ್ಲೆಡೆ ಮೆಚ್ಚುಗೆ ಗಳಿಸಿದ್ದವು. ಈ ಶುಕ್ರವಾರ ಥೀಯೇಟರ್ ಗಳಲ್ಲಿ ನಗುವಿನ ಪಟಾಕಿ ಸಿಡಿಯುವುದು ಗ್ಯಾರಂಟಿ ಎಂದು ಎಲ್ಲರೂ ಕಾಯುತ್ತಿದ್ದ ಹೊತ್ತಲ್ಲಿ, ತಂಡಕ್ಕೆ ಹೊಸ ಗೊಂದಲ ಎದುರಾಗಿತ್ತು. ಕನ್ನಡಿಗರ ನೆಚ್ಚಿನ ಮೋಹಕ ತಾರೆ ರಮ್ಯಾ ಅವರು ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿದ್ದರು. ನಾಳೆ ಸಿನಿಮಾ ತೆರೆ ಕಾಣುತ್ತದಾ, ಇಲ್ಲವಾ ಎಂಬಷ್ಟರ ಮಟ್ಟಿಗೆ ತಲುಪಿತ್ತು. ಆದರೆ ಈಗ ಎಲ್ಲದಕ್ಕೂ ಸುಖಾಂತ್ಯ ಸಿಕ್ಕಿದೆ.
ಬಿಡುಗಡೆಯಾಗಿದ್ದ ಟ್ರೈಲರ್ ನಲ್ಲಿ, ಹಾಗು ಅದರ ನಂತರದ ವಿಡಿಯೋ ಗಳಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರನ್ನು ಕಂಡು ಕನ್ನಡಿಗರು ಖುಷಿ ಪಟ್ಟಿದ್ದರು. ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್ ಹಾಗು ಇತರ ಸ್ಟಾರ್ ಗಳ ಜೊತೆಗೆ ರಮ್ಯಾ ಅವರದ್ದು ಅತಿಥಿ ಪಾತ್ರ ಎಂದು ತಿಳಿದಿತ್ತು. ಆದರೆ ರಮ್ಯಾ ಅವರು ತಂಡದ ವಿರುದ್ಧವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅನುಮತಿಯಿಲ್ಲದೇ ನನ್ನ ವಿಡಿಯೋಗಳನ್ನ ಬಳಸಲಾಗಿದೆ. ಇದಕ್ಕಾಗಿ ಒಂdದು ಕೋಟಿ ದಂಡ ನೀಡಬೇಕು ಎಂದು ದೂರು ನೀಡಿ ಸಿನಿಮಾದ ಬಿಡುಗಡೆಗೆ ತಡೆಯಾಜ್ಞೆ ಕೂಡ ಕೋರಿದ್ದರು. ಆದರೆ ಇಂದು ಈ ಕೇಸ್ ನ ತೀರ್ಮಾನವಾಗಿದೆ. ಕಮರ್ಷಿಯಲ್ ಕೋರ್ಟ್ ರಮ್ಯಾ ಅವರ ದೂರನ್ನು ತಳ್ಳಿ ಹಾಕಿದೆ. ಇದರಿಂದ ಹಾಸ್ಟೆಲ್ ಹುಡುಗರು ನೆಮ್ಮದಿಯಾಗಿ ಉಸಿರಾಡುವಂತಾಗಿದೆ.
ನಾಳೆ ಸಿನಿಮಾ ಬಿಡುಗಡೆ ಆಗುತ್ತದೋ ಇಲ್ಲವೋ ಎಂದು ಅನುಮಾನಿಸಿದ್ದ ಸಿನಿಪ್ರೇಮಿಗಳಿಗೆ ಕೋರ್ಟ್ ಉತ್ತರ ನೀಡಿದೆ. ರಮ್ಯಾ ಅವರ ಅರ್ಜಿಯನ್ನ ವಜಾಗೊಳಿಸಿ, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡಕ್ಕೆ ಸರಾಗವಾದ ಬಿಡುಗಡೆಗೆ ಅನುಮತಿ ನೀಡಲಾಗಿದೆ. ಅಂತೆಯೇ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ, ನಾಳೆ, ಜುಲೈ 21ರಂದು ಎಲ್ಲೆಡೆ ಭರ್ಜರಿ ಬಿಡುಗಡೆ ಕಾಣಲಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಕೂಡ ಆರಂಭವಾಗಿದ್ದು, ಎಲ್ಲ ಟಿಕೆಟ್ ಗಳು ಬಿರುಸಾಗಿ ಮಾರಾಟಗೊಳ್ಳುತ್ತಿವೆ.



