ಕನ್ನಡದಲ್ಲಿ ಬಹುನಿರೀಕ್ಷೆ ಮೂಡಿಸಿರುವ ಸಿನಿಮಾ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಈ ಶುಕ್ರವಾರ ಬಿಡುಗಡೆಯಾಗಲು ಸಿದ್ಧವಾಗಿದೆ. ಹೊಸಬರ ತಂಡ ಸೇರಿ, ನಿರ್ಮಾಣ ನಿರ್ದೇಶನ ನಟನೆ ಮಾಡಿರುವ ಈ ಸಿನಿಮಾ ತಮ್ಮ ಪೋಸ್ಟರ್, ಪ್ರಮೋಷನ್ ವಿಡಿಯೋ ಇವೆಲ್ಲದರಿಂದ ಬಾರೀ ಸದ್ದು ಮಾಡಿದೆ. ಸುಮಾರು ಎರಡು ವರ್ಷಗಳಿಂದ ಎಲ್ಲರ ಗಮನ ಸೆಳೆಯುತ್ತ ಬಂದಿರುವಂತಹ ಈ ಸಿನಿಮಾ ಕೊನೆಗೂ ತೆರೆಕಾಣಲು ತಯಾರಾಗಿದ್ದು, ಸದ್ಯ ಬಿಡುಗಡೆಯ ತಯಾರಿ, ಟ್ರೈಲರ್, ಟೀಸರ್ ಹಾಡುಗಳು ಎಲ್ಲವೂ ಎಡೆಬಿಡದೆ ನಡೆಯುತ್ತಿದೆ. ಈ ಸಿನಿಮಾಗೆ ಆರಂಭದಿಂದಲೂ ಕನ್ನಡದ ಸ್ಟಾರ್ ನಟರ ಸಾಥ್ ಸಿಕ್ಕಿದ್ದು ಗೊತ್ತೇ ಇದೆ. ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್ ಮುಂತಾದ ಹೆಸರಾಂತ ನಟರು ಚಿತ್ರದಲ್ಲಿ ನಟನೆ ಕೂಡ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಹೆಗ್ಗಳಿಕೆಯ ನಡುವೆ, ಚಿತ್ರಕ್ಕೆ ಬೃಹತ್ ಪೆಟ್ಟು ಬಡಿದಿದೆ.


ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ, ಟೀಚರ್ ಆಗಿ ಮೋಹಕ ತಾರೆ ರಮ್ಯಾ ಅವರು ನಟಿಸುತ್ತಿರುವುದು ಗೊತ್ತಿರುವ ವಿಚಾರ. ಈ ಬಗ್ಗೆ ಚಿತ್ರತಂಡ ಬಹಳ ಹಿಂದೆಯೇ ಒಂದು ಪ್ರಮೋಷನಲ್ ವಿಡಿಯೋ ಮಾಡಿತ್ತು. ಅಲ್ಲದೇ ಇತ್ತೀಚೆಗೆ ಬಿಡುಗಡೆಯಾದ ಸಿನಿಮಾದ ಟ್ರೈಲರ್ ನಲ್ಲೂ ಕೂಡ ರಮ್ಯಾ ಅವರ ಕ್ಲಿಪ್ ಗಳು ಸಂಚಲನ ಮೂಡಿಸಿದ್ದವು. ಸದ್ಯ ಈ ಬಗ್ಗೆ ರಮ್ಯಾ ಅವರು ಪ್ರತಿಕ್ರಿಯಿಸಿ ಸಿನಿಮಾ ತಂಡಕ್ಕಷ್ಟೇ ಅಲ್ಲದೇ, ಸಿನಿಮಾ ಪ್ರೇಮಿಗಳಿಗೂ ಶಾಕ್ ನೀಡಿದ್ದಾರೆ. “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡ ನನ್ನ ಅನುಮತಿ ಇಲ್ಲದೆ ನನ್ನ ಫೋಟೋ ಹಾಗು ವಿಡಿಯೋಗಳನ್ನ ಬಳಸಿಕೊಂಡಿದ್ದಾರೆ. ಇದರಿಂದ ನನಗಾಗಿರುವ ನಷ್ಟಕ್ಕಾಗಿ 1 ಕೋಟಿ ರೂಪಾಯಿ ದಂಡ ವಿಧಿಸಬೇಕು” ಎಂದು ನೋಟೀಸ್ ನೀಡಿದ್ದಾರೆ ಮೋಹಕ ತಾರೆ.
ಒಪ್ಪಿಗೆ ಇಲ್ಲದಿದ್ದರೂ ಸಹ, ಟ್ರೈಲರ್ ಹಾಗು ಇತರ ವಿಡಿಯೋಗಳಲ್ಲಿ ತಮ್ಮ ವಿಡಿಯೋ ಕ್ಲಿಪ್ ಗಳನ್ನ ಬಳಸಿಕೊಂಡಿದ್ದಕ್ಕೆ ರಮ್ಯಾ ಮುನಿಸಾಗಿದ್ದಾರೆ ಎನ್ನಲಾಗಿದೆ. ಹಾಗೆಯೇ ಸಿನಿಮಾದಲ್ಲಿ ಕೂಡ ತಮ್ಮ ವಿಡಿಯೋಗಳು ಇರುವುದರಿಂದ ಕಮರ್ಷಿಯಲ್ ಕೋರ್ಟ್ ಮೂಲಕ ತಡೆಯಾಜ್ಞೆ ಹೊರಡಿಸಿದ್ದಾರೆ. ಅದರಿಂದಾಗಿ ಒಂದು ಕೋಟಿ ದಂಡ ನೀಡಬೇಕು ಎಂದು ದೂರು ನೀಡಿದ್ದಾರೆ.
ಇನ್ನೇನು ಬಿಡುಗಡೆಗೆ ಎರಡು ದಿನಗಳಷ್ಟೇ ಬಾಕಿ ಇರುವಾಗ ಸಿನಿಮಾಗೆ ಇಂತದ್ದೊಂದು ಏಟು ಬಿದ್ದಿರುವುದು ತಂಡಕ್ಕೆ ಆತಂಕ ತುಂಬಿಸಿದೆ. ಇದರ ಪರಿಣಾಮ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.



