ಹಾಸ್ಟೆಲ್ ಹುಡುಗರು ಬಾಗಿಲು ತೆಗೆಯಲು ಸಿದ್ದರಾಗಿದ್ದಾರೆ. ಸುಮಾರು ಎರಡು ವರ್ಷಗಳಿಂದ ಎಲ್ಲರಲ್ಲಿ ನಿರೀಕ್ಷೆಗಳ ಬೆಟ್ಟವನ್ನೇ ಹುಟ್ಟಿಸಿ, ಅದನ್ನ ತಮ್ಮ ಪ್ರೊಮೊ, ಪೋಸ್ಟರ್ ಗಳಿಂದ ಬೆಳೆಸುತ್ತ ಬಂದಿರುವ ಈ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಇದೇ ಜುಲೈ 21ಕ್ಕೆ, ಅಂದರೇ ಇನ್ನು ಕೇವಲ ನಾಲ್ಕು ದಿನಗಳಲ್ಲಿ ಇಡೀ ಪ್ರಪಂಚದ ವಿವಿಧ ಭಾಗದಲ್ಲಿ ಬಿಡುಗಡೆ ಕಾಣಲು ಸಜ್ಜಾಗಿದೆ. ತಿಂಗಳುಗಳ ಹಿಂದೆಯೇ ಹೊರಬಿದ್ದಿದ್ದ ಸಿನಿಮಾದ ಮೊದಲ ಹಾಡು ಎಲ್ಲೆಡೆ ಜನರ ಮೆಚ್ಚುಗೆ ಪಡೆಯುತ್ತಾ, ಸಂಚಲನ ಮೂಡಿಸಿದ್ದರೆ, ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಸಿನಿಮಾದ ಮೇಲಿನ ನಿರೀಕ್ಷೆಗಳನ್ನ ಇನ್ನಷ್ಟು ಹೆಚ್ಚಿಸಿತ್ತು. ಸದ್ಯ ಚಿತ್ರತಂಡ ತನ್ನ ಎರಡನೇ ಹಾಡಿನ ಬಿಡುಗಡೆಗೆ ಮುಹೂರ್ತ ಇಟ್ಟಿದೆ. ಮೊದಲ ಹಾಡಿನಲ್ಲಿ ಪ್ರೊಟೆಸ್ಟ್ ಮಾಡಿದ್ದ ಚಿತ್ರತಂಡ, ಎರಡನೇದರಲ್ಲಿ ಏನು ಮಾಡುತ್ತಾರೆ? ನಾಳೆ ತಿಳಿಯಲಿದೆ.


‘ಡ್ರಿಲ್ ಬೀಟ್ ಸಾಂಗ್’ ಎಂಬ ಹೊಸ ಹಾಡನ್ನು ಹೊರಬಿಡಲು ಹಾಸ್ಟೆಲ್ ಹುಡುಗರು ಸಿದ್ದರಾಗಿದ್ದಾರೆ. ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸಂಗೀತವಿರುವುದು ತಿಳಿದಿರುವ ವಿಚಾರ. ಇವರ ಮೊದಲ ಹಾಡು,’ಪ್ರೊಟೆಸ್ಟ್ ಸಾಂಗ್’ ಎಲ್ಲೆಡೆ ಸಕ್ಕತ್ ಟ್ರೆಂಡ್ ಆಗಿತ್ತು. ಸದ್ಯ ಈ ಹಾಡಿನ ಮೂಲಕ ಈ ವರ್ಷದ ಹಾಸ್ಟೆಲ್ ಆ್ಯಂಥೆಮ್ ಅನ್ನು ಜನರಿಗೊಪ್ಪಿಸಲಿದ್ದಾರೆ ಹಾಸ್ಟೆಲ್ ಹುಡುಗರು. ನಾಳೆ, ಅಂದರೇ ಮಂಗಳವಾರ A2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆಯಾಗಲಿದೆ. ಬಿಟ್ಟಿರುವ ಪೋಸ್ಟರ್ ಪ್ರಕಾರ ಹಾಸ್ಟೆಲ್ ವಾರ್ಡನ್ ಮೇಲೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಹೊಡೆದಾಡುವ ಸಾಂಗ್ ಇದಾಗಿರಬಹುದು. ನಾಳೆ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಲಿದೆ.
ವರುಣ್ ಸ್ಟುಡಿಯೋಸ್ ಹಾಗು ಗುಲ್ಮೋಹರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾನವಾಗಿರುವ, ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದ ಈ ಸಿನಿಮಾ ಕನ್ನಡಿಗರ ಸದ್ಯದ ಅತೀ ನಿರೀಕ್ಷೆಯ ಸಿನಿಮಾ ಆಗಿದೆ. ಸುಮಾರು 500 ಯುವಕರು ನಟಿಸಿರುವ ಈ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಇದೇ ಶುಕ್ರವಾರ, ಜುಲೈ 21ಕ್ಕೆ ಎಲ್ಲೆಡೆ ಬಿಡುಗಡೆಯಾಗಲಿದೆ.

