ಕನ್ನಡದ ಸಿನಿಪ್ರೇಮಿಗಳ ನಡುವೆ ಬಾರೀ ಚರ್ಚೆಯನ್ನ ಹುಟ್ಟುಹಹಾಕಿರುವಂತಹ ಹೊಸಬರ ಸಿನಿಮಾ ಈ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಆರಂಭದಿಂದಲೂ ತಮ್ಮ ಪ್ರಚಾರ, ಪೋಸ್ಟರ್ ಹಾಗು ಟೀಸರ್ ಗಳ ಮೂಲಕ ಗಮನ ಸೆಳೆಯುತ್ತ ಬಂದಂತಹ ಈ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಇದೇ ಜುಲೈ 21ಕ್ಕೆ ಸಿನಿಮಾ ಎಲ್ಲೆಡೆ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಿನ ವಿಚಾರ ಅಂದರೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿರುವುದು. ಅದೆಷ್ಟೋ ವಿಡಿಯೋ ಟೀಸರ್ ಗಳ ನಂತರ ಕೊನೆಗೂ ಹಾಸ್ಟೆಲ್ ಹುಡುಗರು ತಮ್ಮ ಟ್ರೈಲರ್ ಅನ್ನ ಜನರ ಮುಂದಿಟ್ಟಿದ್ದಾರೆ. ಹೊಸಬರ ಜೊತೆಗೆ ರಮ್ಯಾ, ರಿಷಬ್ ಶೆಟ್ಟಿ ಸೇರಿದಂತೆ ಇನ್ನೂ ಹಲವರು ಕಾಣಿಸಿಕೊಂಡಿರುವುದು ವಿಶೇಷ. ಸದ್ಯ ಈ ಟ್ರೈಲರ್ ಎಲ್ಲೆಡೆ ಹರಿದಾಡುತ್ತಿದೆ.


ಹಾಸ್ಟೆಲ್ ನಲ್ಲಿ ಇರುವಂತಹ ಆಧುನಿಕ ಯುವಕರ ನಡುವೆ ಆಗುವಂತಹ ಮನರಂಜನಾತ್ಮಕ ಕಥೆ ಈ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಜೀವಾಳ. ಹಲವು ತರ್ಲೆ ಹುಡುಗರು, ಅವರ ಅರೆಬರೆ ಕಿತಾಪತಿಗಳು, ಪೋಲಿ ಆಟಗಳು, ಅವರ ಆಸೆ ಕನಸುಗಳು ಇವೆಲ್ಲದರ ಸುತ್ತ ಸುತ್ತುವ ಹಾಸ್ಯಮಯ ಪಯಣ ಈ ಸಿನಿಮಾದ್ದು. ಜೊತೆಗೆ ಒಬ್ಬ ಶಿಸ್ತು ಕಾಪಾಡಲು ಪ್ರಯತ್ನಿಸೋ ಹಾಸ್ಟೆಲ್ ವಾರ್ಡನ್. ಈ ವಾರ್ಡನ್ ಗೆ ಏನಾದರೂ ಆಗತ್ತಾ? ಅದಕ್ಕೆ ನಮ್ ಹಾಸ್ಟೆಲ್ ಹುಡುಗರೇ ಕಾರಣಾನ? ಏನ್ ಮಾಡಿದಾರೆ ಅವರು? ಮುಂದೇನಾಗುತ್ತದೆ? ಇವೆಲ್ಲವನ್ನ ತಲೆಕೆಡಿಸುವಂತೆ ನಗುವಿನ ಜೊತೆಗೆ ಸಿನಿಮಾದ ಟ್ರೈಲರ್ ಸುಳಿವು ಕೊಟ್ಟಂತಿದೆ. ಒಟ್ಟಿನಲ್ಲಿ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಮನರಂಜನೆಯ ಮಹಾಪೂರ ಆಗುವುದಂತೂ ಖಚಿತ.
ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಅಭಿ ದಾಸ್, ಶ್ರೀವತ್ಸ, ಅರ್ಚನಾ ಕೊಟ್ಟಿಗೆ ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಯುವ ಕಲಾವಿದರು ಹಾಸ್ಟೆಲ್ ಹುಡುಗರಾಗಿ ನಟಿಸಿದ್ದಾರೆ. ಜೊತೆಗೆ ವಿಶೇಷ ಪಾತ್ರಗಳಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ, ನಟ ನಿರ್ದೇಶಕ ರಿಷಬ್ ಶೆಟ್ಟಿ, ಪವನ್ ಕುಮಾರ್, ದಿಗಂತ್ ಅವರು ಕೂಡ ಟ್ರೈಲರ್ ನಲ್ಲಿ ಕಾಣಿಸಿಕೊಂಡಿರುವುದು ನಿರೀಕ್ಷೆ ಹುಟ್ಟಿಸಿದೆ. ‘ಕಾಂತಾರ’ ಖ್ಯಾತಿಯ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ ಸಿನಿಮಾದಲ್ಲಿದೆ. ರಕ್ಷಿತ್ ಶೆಟ್ಟಿಯವರ ಪರಂ ವಾಹ್ ಸ್ಟುಡಿಯೋಸ್ ಸಿನಿಮಾವನ್ನ ಪ್ರೆಸೆಂಟ್ ಮಾಡುತ್ತಿದ್ದು, ಜೀ ಸ್ಟುಡಿಯೋಸ್ ಎಲ್ಲೆಡೆ ವಿತರಿಸಲಿದೆ.
ಎಲ್ಲರೂ ಕಾಯುತ್ತಿದ್ದಂತಹ ಸಿನಿಮಾದ ಟ್ರೈಲರ್ ಅನ್ನು ವಿಶೇಷ ಕಾರ್ಯಕ್ರಮ ನಡೆಸುವ ಮೂಲಕ ಹೊರಬಿಟ್ಟಿದ್ದಾರೆ. ಈ ಕಾರ್ಯಕ್ರಮkke ಅತಿಥಿಗಳಾಗಿ ರಕ್ಷಿತ್ ಶೆಟ್ಟಿ, ಅಶ್ವಿನಿ ಪುನೀತ್ ರಾಜಕುಮಾರ್, ರಿಷಬ್ ಶೆಟ್ಟಿ, ಹಾಗು ಧ್ರುವ ಸರ್ಜಾ ಅವರು ಆಗಮಿಸಿದ್ದರು. ಅವರಿಂದಲೇ ಟ್ರೈಲರ್ ಬಿಡುಗಡೆ ಮಾಡಲಾಯಿತು. ಟ್ರೈಲರ್ ಇದೀಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಇದೇ ಜುಲೈ 21ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ.



