ಸದ್ಯ ಬಿಗ್ ಬಜೆಟ್, ಪಾನ್ ಇಂಡಿಯಾ ಎಂಬ ಸಿನಿಮಾಗಳು ಎಲ್ಲೆಡೆ ರಾಜ್ಯಭಾರ ಮಾಡುತ್ತಿದ್ದರೆ, ನಮ್ಮಲ್ಲಿ ಒಂದು ಪೂರಾ ಹೊಸಬರ ಸಿನಿಮಾ ಬಾರೀ ಸದ್ದು ಮಾಡುತ್ತಿದೆ. ಅದುವೇ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ಈ ಸಿನಿಮಾದ ಹೆಸರನ್ನು ಕೇಳದವರು ಸಿಗುವುದು ಕಷ್ಟ. ಯಾಕೆಂದರೆ ಈ ಚಿತ್ರದ ಪ್ರಚಾರ ಕಾರ್ಯಗಳನ್ನ ಅಷ್ಟು ಅದ್ಭುತವಾಗಿ, ಅಷ್ಟೇ ವಿಭಿನ್ನವಾಗಿ ನಡೆಸುತ್ತಿದೆ ಚಿತ್ರತಂಡ. ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದ ಈ ಹೊಸಬರ ಸಿನಿಮಾಗೆ ಆರಂಭದಿಂದಲೂ ಸ್ಯಾಂಡಲ್ವುಡ್ ನ ಸ್ಟಾರ್ ನಟರ ಸಾಥ್ ಸಿಗುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್ ರಕ್ಷಿತ್ ಶೆಟ್ಟಿ ಮುಂತಾದವರಿಂದ ಪೋಸ್ಟರ್ ಗಳು, ಪ್ರಮೋಷನ್ ವಿಡಿಯೋಗಳು ಬಂದರೆ, ರಿಷಬ್ ಶೆಟ್ಟಿ, ಶೈನ್ ಶೆಟ್ಟಿ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮುಂತಾದವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಎಲ್ಲ ನಟರ ಸಾಲಿಗೆ ದೂದ್ ಪೇಡ ದಿಗಂತ್ ಅವರು ಕೂಡ ಸೇರಿಕೊಂಡಿದ್ದಾರೆ.
ಜುಲೈ 8ರಂದು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್ ಒಂದು ಬಿಡುಗಡೆಯಾಗಿದೆ. ಈ ಟೀಸರ್ ನಲ್ಲಿ ದಿಗಂತ್ ಕಾಣಿಸಿಕೊಂಡಿದ್ದಾರೆ. ಗುಂಗುರು ಕೂದಲ ವಿಗ್ ತೊಟ್ಟು, ಟೀಸರ್ ಎಡಿಟ್ ಮಾಡುವವನ ರೀತಿ ಕಾಣಿಸಿಕೊಂಡಿರುವ ದಿಗಂತ್, ಚಿತ್ರದ ಟ್ರೈಲರ್ ಬಿಡುಗಡೆಯ ದಿನಾಂಕವನ್ನ ಕೂಡ ಜನರಿಗೆ ತಿಳಿಸಿದ್ದಾರೆ. ದಿಗಂತ್ ಅವರನ್ನೂ ತೆರೆಯ ಮೇಲೆ ನೋಡಿದ ರೀತಿ, ಆ ವಿಡಿಯೋ ಎಲ್ಲವೂ ಜನರ ಮನ ಗೆಲ್ಲುತ್ತಿದೆ.


ಇದೆ ಜುಲೈ 10ರ ಸಂಜೆ 6ಗಂಟೆಗೆ ತುಂಗಾ ಹಾಸ್ಟೆಲ್ ಹುಡುಗರು ತಮ್ಮ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಇನ್ನೂ ಆ ಟ್ರೈಲರ್ ಗೆ ಯಾವ ಸ್ಟಾರ್ ಅನ್ನು ಕರೆಸುತ್ತಾರೆ, ಇನ್ನ್ಯಾವ ರೀತಿಯ ವಿಭಿನ್ನ ವಿಡಿಯೋ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಒಟ್ಟಿನಲ್ಲಿ ಪ್ರಚಾರದ ಕೆಲಸಗಳು ಎಂದರೆ ಅದಕ್ಕೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತಂಡದವರಷ್ಟು ಚಾಕಚಕ್ಯತೆ ಯಾರಲ್ಲೂ ಇಲ್ಲ ಎನ್ನುತ್ತಿದ್ದಾರೆ ಸಿನಿಪ್ರೇಮಿಗಳು.
ದಿಗಂತ್ ಅವರು ಕೂಡ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಧೃಡವಾದ ವಿಚಾರಗಳು ಯಾವುದು ಕೇಳಿಬರದೇ ಇದ್ದರೂ, ಬಂಟಿ ಗೌಡ ಎಂಬ ಪಾತ್ರದಲ್ಲಿ ದಿಗಂತ್ ಹಾಸ್ಟೆಲ್ ಹುಡುಗರ ಜೊತೆಗೆ ಬರಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ಇದೆ ಜುಲೈ 21ಕ್ಕೆ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಎಲ್ಲೆಡೆ ಬಿಡುಗಡೆಯಾಗಲಿದೆ. ಜುಲೈ 10ಕ್ಕೆ ಸಿನಿಮಾದ ಟ್ರೈಲರ್ ಹೊರಬೀಳಲಿದೆ.

