HomeNewsಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ನಮ್ಮ 'ಹೊಂಬಾಳೆ ಫಿಲಂಸ್'ಗೆ! ಇವರ ಮುಂದಿನ ಸಿನಿಮಾಗಳು ಯಾವುವು ಹಾಗಾದರೆ!?

ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ನಮ್ಮ ‘ಹೊಂಬಾಳೆ ಫಿಲಂಸ್’ಗೆ! ಇವರ ಮುಂದಿನ ಸಿನಿಮಾಗಳು ಯಾವುವು ಹಾಗಾದರೆ!?

ಕೆಜಿಎಫ್ ಎಂಬ ಒಂದು ಸುಂದರ, ರೋಮಾಂಚಕ ಪ್ರಪಂಚವನ್ನ ಸಿನಿಪ್ರೇಮಿಗಳಿಗೆ ಕಟ್ಟಿಕೊಟ್ಟು ಇದೀಗ ಇಡೀ ಪ್ರಪಂಚದಾದ್ಯಂತ ಪ್ರಸಿದ್ದಿ ಪಡೆದಿರುವ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ನಿನ್ನಿಂದಲೇ’ ಚಿತ್ರದಿಂದ ಆರಂಭಿಸಿ, ಇದೀಗ ಈ ಜೂನ್ 23ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ‘ಧೂಮಮ್’ ವರೆಗೆ ಹಲವು ಪ್ರಭುದ್ಧ, ಉತ್ತಮ ಸಿನೆಮಾಗಳನ್ನು ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರ್. ಕೆಜಿಎಫ್,ಕಾಂತಾರ ಜೊತೆಗೆ ರಾಜಕುಮಾರ, ಯುವರತ್ನ, ಮಾಸ್ಟರ್ ಪೀಸ್ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನ ಹೊಂಬಾಳೆ ಫಿಲಂಸ್ ನೀಡುತ್ತಾ ಬಂದಿದೆ. ಇದೀಗ ಕನ್ನಡದ ಜೊತೆಜೊತೆಯಲ್ಲೇ ನೆರೆಯ ಭಾಷೆಗಳಲ್ಲೂ ಕೂಡ ಹೊಸ ಸಿನಿಮಾಗಳ ನಿರ್ಮಾಣಕ್ಕೆ ಹೊಂಬಾಳೆ ಫಿಲಂಸ್ ಕೈ ಹಾಕಿದೆ. ಹಾಗಾದರೆ ಆ ಚಿತ್ರಗಳು ಯಾವುವು?



ಹೊಂಬಾಳೆ ಫಿಲಂಸ್ ನ ಮುಂದಿನ ಸಿನಿಮಾಗಳ ಬಗ್ಗೆ ಕೇಳಿದರೆ ಮೊದಲು ಕೇಳುವ ಹೆಸರು ‘ಸಲಾರ್’. ಕೆಜಿಎಫ್ ನದ್ದೇ ನಿರ್ದೇಶಕ ಪ್ರಶಾಂತ್ ನೀಲ್ ಹಾಗು ಪ್ರಭಾಸ್ ಜೊತೆಯಾಗಿ ಮಾಡುತ್ತಿರುವ ಈ ಸಿನಿಮಾ ಭಾರತದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಈ ಸೆಪ್ಟೆಂಬರ್ 28ಕ್ಕೆ ಸಿನಿಮಾ ಎಲ್ಲೆಡೆ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಇನ್ನೊಂದು ಆಕ್ಷನ್ ಸಿನಿಮಾ ರೋರಿಂಗ್ ಸ್ಟಾರ್ ಶ್ರೀಮುರುಳಿ ನಟಿಸುತ್ತಿರುವ ಬಹುನಿರೀಕ್ಷಿತ ‘ಭಘೀರಾ’. ಸದ್ಯ ಚಿತ್ರೀಕರಣದ ಹಂತದಲ್ಲಿರುವ, ಪ್ರಶಾಂತ್ ನೀಲ್ ಕಥೆಯಿರುವ ಈ ಸಿನಿಮಾವನ್ನು ಡಾ| ಸೂರಿ ಅವರು ನಿರ್ದೇಶನ ಮಾಡುತ್ತಿದ್ದಾರೆ.

ರಾಜ್ ಕುಟುಂಬದ ಕುಡಿ ಯುವರಾಜಕುಮಾರ್ ಅವರನ್ನು ಲಾಂಚ್ ಮಾಡುವ ಜವಾಬ್ದಾರಿ ಕೂಡ ಹೊಂಬಾಳೆ ಫಿಲಂಸ್ ಹೊತ್ತುಕೊಂಡಿದೆ. ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನದ,’ಯುವ’ ಎಂಬ ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಕಾಂತಾರದ ಸಪ್ತಮಿ ಗೌಡ ಇದಕ್ಕೆ ನಾಯಕಿ. ಸದ್ಯ ಚಿತ್ರೀಕರಣ ನಡೆಸುತ್ತಿದೆ. ಜೊತೆಗೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಜಗಮೆಚ್ಚಿದ ಸಿನಿಮಾ ‘ಉಳಿದವರು ಕಂಡಂತೆಯ’ ಮುಂದುವರೆದ ಭಾಗ ‘ರಿಚರ್ಡ್ ಅಂಟೋನಿ’ ಕೂಡ ‘ಹೊಂಬಾಳೆ ಫಿಲಂಸ್’ ಬ್ಯಾನರ್ ಅಡಿಯಲ್ಲೇ ಬರಲಿದೆ.



ಇನ್ನೂ ಮಲಯಾಳಂ ನ ಸ್ಟಾರ್ ನಟ ನಿರ್ದೇಶಕ ಪ್ರಥ್ವಿರಾಜ್ ಸುಕುಮಾರನ್ ಅವರ ಜೊತೆಗೂ ಕೂಡ ಹೊಂಬಾಳೆ ಫಿಲಂಸ್ ಸಿನಿಮಾವೊಂದನ್ನು ಘೋಷಣೆ ಮಾಡಿದ್ದು, ಅವರೇ ನಿರ್ದೇಶಿಸಿ ನಟಿಸುತ್ತಿರುವ ಈ ಸಿನಿಮಾಗೆ ‘ಟೈಸನ್’ ಎಂದು ಹೆಸರಿಡಲಾಗಿದೆ. ಜೊತೆಗೆ ಕೀರ್ತಿ ಸುರೇಶ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ರಘು ತಾತ’ ಎಂಬ ಸಿನಿಮಾಗೆ ಕೂಡ ಹೊಂಬಾಳೆ ಬಂಡವಾಳ ಹೂಡಿದ್ದು, ಸುಮನ್ ಕುಮಾರ್ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇವು ಸದ್ಯಕ್ಕೆ ಖಾತ್ರಿಯಾಗಿರುವ, ಕೆಲಸ ನಡೆಯುತ್ತಿರುವ ಸಿನಿಮಾಗಳು. ಇನ್ನೂ ಹೇಳದ, ತಯಾರಿಯಲ್ಲಿರುವ ಅದೆಷ್ಟು ಸಿನಿಮಾಗಲಿವೆಯೋ ತಿಳಿಯದು. ಮೂಲಗಳನ್ನು ನಂಬುವುದಾದರೆ ಮತ್ತೊಂದು ತೆಲುಗು ಸಿನಿಮಾವನ್ನ ಕೂಡ ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ‘ಸೀತಮ್ಮ ಅಂದಾಲು ರಾಮಯ್ಯ ಸಿತ್ರಾಲು’ ಸೇರಿದಂತೆ ಹಲವು ಸಿನಿಮಾಗಳಿಗೆ ಪ್ರಸಿದ್ಧಿ ಪಡೆದ ಶ್ರೀನಿವಾಸ ಗವಿರೆಡ್ಡಿ ಅವರ ನಿರ್ದೇಶನದ ಹೊಸ ಚಿತ್ರಕ್ಕೆ ವಿಜಯ್ ಕಿರಗಂದೂರ್ ಅವರು ನಿರ್ಮಾಪಕರಾಗಿರಲಿದ್ದಾರೆ ಎಂಬ ಸುದ್ದಿ ಕೂಡ ಇದೆ. ಆದರೆ ಅಧಿಕೃತ ಯಾವ ಘೋಷಣೆ ಕೂಡ ಈ ವರೆಗೆ ಆಗಿಲ್ಲ. ಜೊತೆಗೆ ಜನರೇ ಕೇಳುತ್ತಿರುವ, ಎಲ್ಲರೂ ಕಾಯುತ್ತಿರುವ ‘ಕೆಜಿಎಫ್ ಚಾಪ್ಟರ್ 3’ ಕೂಡ ಮಾಡುವುದಾಗಿ ಹೊಂಬಾಳೆ ಫಿಲಂಸ್ ಹೇಳಿಕೊಂಡಿದೆ. ಒಂದಾದ ಮೇಲೆ ಒಂದರಂತೆ ಉತ್ತಮ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಈ ನಮ್ಮ ಹೆಮ್ಮೆಯ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲಂಸ್’ ಹಾಗು ನಿರ್ಮಾಪಕ ವಿಜಯ್ ಕಿರಗಂದೂರ್ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ. ಇವರಿಂದ ಇನ್ನಷ್ಟು ಉತ್ತಮ ಸಿನಿಮಾಗಳು ನಮಗೆ ನೋಡಲು ಸಿಗಲಿ ಎಂಬುದಷ್ಟೇ ನಮ್ಮ ಆಶಯ!

RELATED ARTICLES

Most Popular

Share via
Copy link
Powered by Social Snap