HomeNewsಮುಂದಿನ 5 ವರ್ಷದಲ್ಲಿ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಸಂಸ್ಥೆ

ಮುಂದಿನ 5 ವರ್ಷದಲ್ಲಿ 3 ಸಾವಿರ ಕೋಟಿ ಹೂಡಿಕೆ: ಹೊಂಬಾಳೆ ಸಂಸ್ಥೆ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹಿಟ್ ಚಿತ್ರಗಳನ್ನು ನೀಡಿರುವ ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್’ ಮಹತ್ವದ ಘೋಷಣೆಯನ್ನು ಟ್ವಿಟರ್ ನಲ್ಲಿ ‌ ಘೋಷಿಸಿದ್ದಾರೆ.

‘ಮಾಸ್ಟರ್ ಪೀಸ್’, ‘ರಾಜಕುಮಾರ’ ‘ಕೆಜಿಎಫ್’, ‘ಕೆಜಿಎಫ್-2’, ‘ಕಾಂತಾರ’ದಿಂದ ಉತ್ತಮ ಕಲೆಕ್ಷನ್ ಮಾಡಿದ್ದು,ಮಲಯಾಳಂನ ‘ಧೂಮಂ’, ‘ಟೈಸನ್’ ತೆಲುಗಿನ ‘ಸಲಾರ್’, ‘ಬಘೀರ’ದಂತಹ ಚಿತ್ರಗಳನ್ನು ನಿರ್ಮಾಣ ಮಾಡಲಿದೆ.

ಮುಂದಿನ 5 ವರ್ಷಗಳಲ್ಲಿ ಮನರಂಜನಾ ಕ್ಷೇತ್ರದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ ಎಂದು ಹೊಂಬಾಳೆ ಫಿಲಮ್ಸ್ ನ ವಿಜಯ್ ಕಿರಗಂದೂರು ಘೋಷಿಸಿದ್ದಾರೆ.

ನಾಡಿನ ಜನತೆಗೆ ಹೊಸವರ್ಷದ ಶುಭಾಶಯ ಕೋರಿರುವ ವಿಜಯ್ ಕಿರಗಂದೂರು, ಕಳೆದ ವರ್ಷ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದ ನಾಡಿನ ಸಮಸ್ತ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನೂತನ ವರ್ಷದಲ್ಲಿ ನವ ಸಂಕಲ್ಪದೊಂದಿಗೆ ಬೃಹತ್ ಯೋಜನೆಗಳನ್ನು ಘೋಷಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಚಿತ್ರ ಪ್ರೇಮಿಗಳ ಪ್ರೀತಿ ಮತ್ತು ಪ್ರೋತ್ಸಾಹದ ಫಲವಾಗಿ ಹೊಂಬಾಳೆ ಫಿಲಮ್ಸ್ ಅತ್ಯಂತ ಯಶಸ್ವಿ ಚಲನಚಿತ್ರಗಳನ್ನು ಕೊಡುಗೆಯಾಗಿ ನೀಡಿದ್ದು, ಈ ಯಶಸ್ವೀ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ತೀರ್ಮಾನಿಸಿದ್ದೇವೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ. ಅದರ ಭಾಗವಾಗಿ ಮುಂದಿನ 5 ವರ್ಷದಲ್ಲಿ ಮನರಂಜನಾ ಕ್ಷೇತ್ರದಲ್ಲಿ 3 ಸಾವಿರ ಕೋಟಿ ಹೂಡಲು ಯೋಜನೆ ಸಿದ್ದವಾಗಿದೆ ಎಂದು ಘೋಷಿಸಿದ್ದಾರೆ.

ಹೊಂಬಾಳೆ ಫಿಲಮ್ಸ್ ಸಂಸ್ಥೆ ಇಂದು ದೇಶದ ಪ್ರತಿಷ್ಠಿತ ಚಿತ್ರ ನಿರ್ಮಾಣ ಎಂಬ ಹೆಗ್ಗಳಿಕೆ ಪಡೆದಿರುವುದು ಚಿತ್ರ ಪ್ರೇಮಿಗಳ ಬೆಂಬಲದಿಂದ ಎಂದು ವಿಜಯ್ ಸ್ಮರಿಸಿದ್ದಾರೆ.

ನಾಡಿನ ಇತಿಹಾಸ, ಪರಂಪರೆ, ಕಲೆ- ಸಂಸ್ಕೃತಿ , ಮತ್ತು ಸಂಪ್ರದಾಯಗಳನ್ನು ವಿಶ್ವಕ್ಕೆ ಪರಿಚಯಿಸುವ ಇನ್ನಷ್ಟು ಉತ್ತಮ ಗುಣಮಟ್ಟದ ಚಲನಚಿತ್ರಗಳನ್ನು ನಿರ್ಮಿಸಿ ನಾಡಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.



ಇಂದು ಮನರಂಜನಾ ಕ್ಷೇತ್ರ ಬೃಹದಾಕಾರವಾಗಿ ಬೆಳೆದಿದ್ದು ನಮ್ಮ ದೇಶದಲ್ಲಿ ವೈವಿದ್ಯಮಯ ಗುಣಮಟ್ಟದ ಚಿತ್ರ ನಿರ್ಮಾಣಕ್ಕೆ ವಿಫುಲ ಅವಕಾಶವಿದೆ. ದೇಶದ ಯುವಪೀಳಿಗೆಯನ್ನು ಜಾಗೃತಗೊಳಿಸುವ ಮತ್ತು ಹೆಚ್ಚು ಪ್ರೋತ್ಸಾಹಿಸುವ ಸಲುವಾಗಿ ಮನರಂಜನಾ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಸೇವೆ ಮಾಡಲು ನಾವು ಉದ್ದೇಶಿಸಿದ್ದೇವೆ ಎಂದು ಹೇಳಿದ್ದಾರೆ.

ನಾಡಿನ ಜನತೆ ಹೊಂಬಾಳೆ ಫಿಲಮ್ಸ್ ಮೇಲೆ ಇಟ್ಟಿರುವ ನಂಬಿಕೆ, ಭರವಸೆಗಳನ್ನು ಹುಸಿಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಾಗಿದ್ದು , ಇನ್ನಷ್ಟು ಹೊಸತನದ ವಿಭಿನ್ನ ಚಿತ್ರಗಳನ್ನು ನಿರ್ಮಿಸುವ ಮೂಲಕ ಮನರಂಜನಾ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆ ನೀಡುವ ಸಂಕಲ್ಪ ಮಾಡಿದ್ದೇವೆ ಎಂದು ವಿಜಯ್ ಹೇಳಿದ್ದಾರೆ.

ಹೊಸವರ್ಷ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಹಾರೈಸುತ್ತಾ , ನಾಡಿನ ಜನತೆಯ ಪ್ರೀತಿ-ವಿಶ್ವಾಸ, ಬೆಂಬಲ ಪ್ರೋತ್ಸಾಹ ಹೀಗೆ ಇರಲಿ ಎಂದು ವಿಜಯ್ ಕಿರಗಂದೂರು ಹಾರೈಸಿದ್ದಾರೆ.

RELATED ARTICLES

Most Popular

Share via
Copy link
Powered by Social Snap