ಸದ್ಯ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟ ಅನೂಪ್ ರೇವಣ್ಣ ಅವರ ನಟನೆಯ ಎರಡನೇ ಚಿತ್ರ ಇದೀಗ ಸದ್ದು ಮಾಡುತ್ತಿದೆ. ಈಗಾಗಲೇ ಬಿಡುಗಡೆಯಾದ ‘ಲಕ್ಷ್ಮಣ’ ಚಿತ್ರದ ಮೂಲಕ ಸಿನಿಪ್ರೇಮಿಗಳಿಗೆ ಪರಿಚಿತವಾಗಿರುವ ಅನೂಪ್ ರೇವಣ್ಣ ಅವರ ಮುಂದಿನ ಸಿನಿಮಾ ‘ಹೈಡ್ ಅಂಡ್ ಸೀಕ್’. ಈ ಸಿನಿಮಾದಲ್ಲಿ ಅನೂಪ್ ರೇವಣ್ಣ ಅವರ ಜೊತೆ ಧನ್ಯ ರಾಮ್ ಕುಮಾರ್ ಅವರು ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಸಿನಿಮಾದ ಫರ್ಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು. ಚಿತ್ರದ ಮೇಕಿಂಗ್ ವಿಡಿಯೋ ಕೂಡ ಬಿಡುಗಡೆಯಾಗಿದೆ. ಈ ಸಿನಿಮಾಗೆ ಪುನೀತ್ ನಾಗರಾಜ್ ಅವರು ನಿರ್ದೇಶಕರು.
ಚಿತ್ರದ ಮೇಕಿಂಗ್ ವಿಡಿಯೋವನ್ನು ಮಾಜಿ ಸಚಿವರಾದ ಹೆಚ್ ಎಂ ರೇವಣ್ಣ ಅವರು ಬಿಡುಗಡೆ ಮಾಡಿದ್ದರು. ಈ ವೇಳೆ ಮಾತನಾಡಿದ ಅವರು, “ನಿರ್ದೇಶಕ ಪುನೀತ್ ಅವರು ನನ್ನ ಬಳಿ ಈ ಕಥೆ ತಂದು, ಸಿನಿಮಾ ಮಾಡಲಿದ್ದೇವೆ ಎಂದಾಗ ತುಂಬಾ ಸಂತಸವಾಯಿತು. ಕಥೆಯಲ್ಲಿನ ಸನ್ನಿವೇಶಗಳು ತುಂಬಾ ಕುತೂಹಲಕಾರಿಯಾಗಿವೆ. ಈಗ ಕನ್ನಡ ಚಿತ್ರರಂಗದ ಮೇಲೆ ಹಲವರ ನಿರೀಕ್ಷೆ ಇದೇ. ಈ ಸಿನಿಮ ಕೂಡ ಅಂತದ್ದೇ ಯಶಸ್ಸು ಕಾಣಲಿ. ನಿರ್ದೇಶಕ ಪುನೀತ್ ಅವರ ಪ್ರಯತ್ನಕ್ಕೆ ಶುಭವಾಗಲಿ” ಎಂದರು. ಇನ್ನು ನಾಯಕ ಅನೂಪ್ ರೇವಣ್ಣ ಮಾತನಾಡಿ, “ನಾನಿಲ್ಲಿ ಹೀರೋ ವಿಲನ್ ಎರಡೂ ರೀತಿಯ ಭಾವವಿರುವ ಪಾತ್ರ ನಿರ್ವಹಿಸಿದ್ದೇನೆ. ನನ್ನ ಹಿಂದಿನ ಸಿನಿಮಾಗಿಂತ ಈ ಪಾತ್ರ ತುಂಬಾ ಭಿನ್ನ. ಇದೊಂದು ಜಾಸ್ತಿ ಮಾತನಾಡದ, ಏನನ್ನೂ ಹೇಳಿಕೊಳ್ಳದಂತಹ ಪಾತ್ರ. ನಿರ್ದೇಶಕರು ಅದ್ಭುತವಾದ ಕಥೆ ಮಾಡಿಕೊಂಡಿದ್ದರು” ಎಂದರು.


ಪುನೀತ್ ನಾಗರಾಜು ಅವರು ಸಿನಿಮಾ ನಿರ್ದೇಶನ ಮಾತ್ರವಲ್ಲದೆ ವಸಂತ್ ರಾವ್ ಎಂ ಕುಲಕರ್ಣಿ ಅವರ ಜೊತೆ ಸೇರಿ ‘ಸುನೇರಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ. ಈ ವೇಳೆ ಮಾತನಾಡುವ ಪುನೀತ್, “ಚಿತ್ರದ ಕಥೆ ಒಂದು ಹುಡುಗಿಯ ಅಪಹರಣದ ಸುತ್ತ ನಡೆಯುವಂತದ್ದು. ಇದರಲ್ಲಿ ನಾಯಕನೇ ಕಿಡ್ನಾಪರ್. ನಾಯಕಿ ಧನ್ಯ ರಾಮಕುಮಾರ್ ಅವರು ಒಬ್ಬ ಬ್ಯುಸಿನೆಸ್ ಮ್ಯಾನ್ ನ ಮಗಳಾಗಿ ಕಾಣಿಸಿಕೊಳ್ಳುತ್ತಾರೆ. ಬೆಂಗಳೂರು, ಮಾಗಡಿ ಹಾಗು ಚಿಕ್ಕಮಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಸುಮಾರು 30ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ರಿವರ್ಸ್ ಸ್ಕ್ರೀನ್ ಪ್ಲೇ ಮೂಲಕ, ಪ್ರೇಕ್ಷಕರಿಗೆ ಹೆಚ್ಚಿನ ಕುತೂಹಲ ಹುಟ್ಟುವಂತೆ ಕಥೆ ಹೇಳುವಂತಹ ಪ್ರಯತ್ನವನ್ನ ಮಾಡಿದ್ದೇವೆ. ಸಿನಿಮಾ ಯಶಸ್ವಿಯಾಗಲಿ ಎಂಬ ನಿರೀಕ್ಷೆಯಿದೆ” ಎಂದರು. ನಿರ್ಮಾಪಕ ವಸಂತ್ ರಾವ್ ಅವರು ಮಾತನಾಡಿ, ” ಪುನೀತ್ ಅವರು ಹೇಳಿದ ಈ ಕಥೆ ತುಂಬಾ ಇಷ್ಟವಾಯಿತು. ನಾನೊಬ್ಬ ಕಲಾ ನಿರ್ದೇಶಕ. ನನ್ನ ಇಲ್ಲಿಯವರೆಗಿನ ದುಡಿಮೆಯನ್ನ ಈ ಸಿನಿಮಾ ಹಾಕಿದ್ದೇನೆ” ಎಂದರು.
ಇದೇ ವೇಳೆ ನಾಯಕಿ ಧನ್ಯ ರಾಮ್ ಕುಮಾರ್ ಅವರು ಮಾತನಾಡಿ, ” ಇದೊಂದು ವಿಭಿನ್ನ ಕಥೆ. ನನ್ನದು ಅಪ್ಪನ ಮುದ್ದಿನ ಮಗಳ ಪಾತ್ರ. ಅದಕ್ಕೆ ನನ್ನ ಎರಡನೇ ಸಿನಿಮಾವಾಗಿ ಈ ಚಿತ್ರವನ್ನ ಒಪ್ಪಿಕೊಂಡೆ. ತುಂಬಾ ಟ್ವಿಸ್ಟ್ ಟರ್ನ್ ಇಟ್ಟುಕೊಂಡು, ಕೊನೆವರೆಗೂ ಕುತೂಹಲದಲ್ಲೇ ಇಡುವಂತಹ ಈ ಮಿಸ್ಟರಿ ಥ್ರಿಲರ್ ರೀತಿಯ ಸ್ಕ್ರಿಪ್ಟ್ ಅನ್ನು ಕೇಳಿದ ಕೂಡಲೇ ಒಪ್ಪಿಕೊಂಡಿದ್ದೆ” ಎಂದು ಚಿತ್ರದ ಬಗ್ಗೆ ಶುಭನುಡಿ ನುಡಿದರು. ‘ಸುನೇರಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಸಿದ್ದವಾಗಿರೋ ಈ ಚಿತ್ರಕ್ಕೆ ಸ್ಯಾಂಡಿ ಅದಾನ್ಕಿ ಅವರ ಸಂಗೀತ, ರಿಜೊ ಪಿ ಜಾನ್ ಅವರ ಛಾಯಾಗ್ರಾಹಣ ಹಾಗು ಮಧು ತುಂಬರಕೆರೆ ಅವರ ಸಂಕಲನ ದೊರೆತಿದೆ. ಅನೂಪ್ ರೇವಣ್ಣ, ಧನ್ಯ ರಾಮಕುಮಾರ್ ಅವರ ಜೊತೆಗೇ ಮೈತ್ರಿ ಜಗ್ಗಿ, ರಕ್ಷಾ ಉಮೇಶ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

