ಡಾಲಿ ಧನಂಜಯ ಅಭಿನಯದ 25ನೇ ಸಿನಿಮಾ ‘ಗುರುದೇವ್ ಹೊಯ್ಸಳ’ ಸದ್ಯ ಕನ್ನಡದ ಇನ್ನೊಂದು ನಿರೀಕ್ಷಿತ ಸಿನಿಮಾ. ನಟರಾಕ್ಷಸ ಎಂದೇ ಖ್ಯಾತರಾಗಿರುವ ಡಾಲಿ, ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಕ್ಕ ಕಮರ್ಷಿಯಲ್ ಆಕ್ಷನ್ ಸಿನಿಮಾಗೆ ಡಾಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೆ ಆರ್ ಜಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಇದೇ ಮಾರ್ಚ್ ಮಾಸಾಂತ್ಯಕ್ಕೆ, ಅಂದರೆ ಮಾರ್ಚ್ 30ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆಯ ಮುಹೂರ್ತವನ್ನ ಚಿತ್ರತಂಡ ಹೊರಬಿಟ್ಟಿದೆ.
ವಿಜಯ್ ಎನ್ ಅವರು ರಚಿಸಿ ನಿರ್ದೇಶಿಸಿರುವ ‘ಗುರುದೇವ್ ಹೊಯ್ಸಳ’ ಸಿನಿಮಾದಲ್ಲಿ ಡಾಲಿ ಧನಂಜಯ ಸಿನಿಮಾದ ಶೀರ್ಷಿಕೆಯ ಹೆಸರಿನದ್ದೇ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದರೆ, ಇವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ‘ಗುಳ್ಟು’ ಖ್ಯಾತಿಯ ನವೀನ್ ಶಂಕರ್ ಅವರ ಜೊತೆಗೇ ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಹಲವು ಹೆಸರಾಂತ ನಟರು ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗು ಟೀಸರ್ ವಿಡಿಯೋಗಳು ಜನತೆಯ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೇ ಮಾರ್ಚ್ 20ನೇ ತಾರೀಕಿನಂದು, ಸಿನಿಮಾ ಬಿಡುಗಡೆಗೂ 10ದಿನ ಮುಂಚಿತವಾಗಿ ‘ಗುರುದೇವ್ ಹೊಯ್ಸಳ’ ಸಿನಿಮಾದ ಟ್ರೈಲರ್ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿದೆ. ಮಾರ್ಚ್ 20ರ ಸಂಜೆ 7:29ಕ್ಕೆ ಸರಿಯಾಗಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.
ಕಾರ್ತಿಕ್ ಕೆ ಆರ್ ಜಿ ಹಾಗು ಯೋಗಿ ಜಿ ರಾಜ್ ಅವರ ‘ಕೆ ಆರ್ಜಿ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ‘ಗುರುದೇವ್ ಹೊಯ್ಸಳ’ ಸಿನಿಮಾಗೆ ವಿಜಯ್ ಎನ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಈಗಾಗಲೇ ಎಲ್ಲರ ಗಮನ ಸೆಳೆಯುತ್ತಿದೆ. ಡಾಲಿ ಧನಂಜಯ ಅವರ 25ನೇ ಸಿನಿಮಾ ಆಗಿರುವುದರಿಂದ ಅಭಿಮಾನಿಗಳು ಈ ಚಿತ್ರವನ್ನ ಸಂಭ್ರಮಿಸಲು ಸಿದ್ದವಾಗಿದ್ದಾರೆ. ಸದ್ಯ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದು, ಇದೇ ಮಾರ್ಚ್ 20ಕ್ಕೆ ಟ್ರೈಲರ್ ಬಿಡುಗಡೆ ಮಾಡಲು ಸಿದ್ಧವಾಗಿದೆ. ಕಾರ್ತಿಕ್ ಎಸ್ ಅವರ ಛಾಯಾಗ್ರಾಹಣ, ಮಾಸ್ತಿ ಅವರ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಅವರ ಕಲೆಯನ್ನ ಸಿನಿಮದಲ್ಲಿ ನೋಡಬಹುದು. ಇದೇ ಮಾರ್ಚ್ 20ನೇ ತಾರೀಕು ‘ಗುರುದೇವ್ ಹೊಯ್ಸಳ’ ಬೆಳ್ಳಿತೆರೆಗಳ ಮೇಲೆ ಬರಲು ಸಜ್ಜಾಗಿ ನಿಂತಿದ್ದಾನೆ. ‘ಈ ಸಲ ಹೊಯ್ಸಳ’ ಎನ್ನುತ್ತಿರುವ ಇವನ ಆರ್ಭಟ ಇನ್ನೇನು ಸದ್ಯದಲ್ಲೇ ಶುರುವಾಗಲಿದೆ, ಅಥವಾ ಶುರುವಾಗಿಯೇ ಇದೆ.

