ಅಪ್ಪು ಅವರ ‘ಗಂಧದ ಗುಡಿ’ ಬರೀ ಸಿನಿಮಾವಲ್ಲ. ಅದೊಂದು ಅನುಭವ. ನಾಡ ಸೊಬಗನ್ನು ಸವಿಯುವ ಅನುಭವ. ಜೀವ ವೈವಿಧ್ಯತೆಯನ್ನು ಸಾರುವ ಅದ್ಭುತ ದೃಶ್ಯ ಕಾವ್ಯ.
ಅಮೋಘ ವರ್ಷ ಅವರ ‘ಗಂಧದ ಗುಡಿ’ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಅಭಿಮಾನಿಗಳು,ಗಣ್ಯರು ಎಲ್ಲರೂ ಅಪ್ಪು ಸರಳ, ಸಜ್ಜನಿಕೆಯ ವ್ಯಕ್ತಿತ್ವವನ್ನು ಮತ್ತೊಮ್ಮೆ ಗಂಧದ ಗುಡಿ ಮೂಲಕ ನೋಡಿ ಶ್ಲಾಘಿಸುತ್ತಿದ್ದಾರೆ.
ಇಂಥ ಸಾಕ್ಷ್ಯ ಚಿತ್ರ ಮುಂದಿನ ಪೀಳಿಗೆಗೂ ಸಾರಬೇಕೆಂದು ಹಲವು ಮಂದಿ ಟ್ವೀಟ್ ಮೂಲಕ ಆಗ್ರಹಿಸುತ್ತಿದ್ದಾರೆ. ನಿರ್ದೇಶಕ ಮಂಸೋರೆ ಅವರು ಈ ಬಗ್ಗೆ ಕರ್ನಾಟಕದ ಪ್ರತೀ ಶಾಲೆ ಕಾಲೇಜಿನ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ #ಗಂಧದಗುಡಿ ಸಿನೆಮಾ ತೋರಿಸಲಿ. ಕರ್ನಾಟಕದ ಭೌಗೋಳಿಕ ವೈಭವ ಮುಂದಿನ ಪೀಳಿಗೆ ಅರಿಯುವಂತಾಗಲಿ. ಹತ್ತಾರು ಪುಸ್ತಕ ಓದುವುದಕ್ಕಿಂತ ಹೆಚ್ಚುಪರಿಣಾಮಕಾರಿಯಾಗಿ ಸಿನೆಮಾ ವಿಧ್ಯಾರ್ಥಿಗಳಿಗೆ ಅರ್ಥವಾಗುತ್ತದೆ ಎಂದಿದ್ದಾರೆ
ಇದಲ್ಲದೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸಹ ಈ ಬಗ್ಗೆ ಟ್ವೀಟ್ ಮಾಡಿದ್ದು, ‘ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ & ವನ್ಯ ಜೀವಿಗಳ ಕುರಿತಂತೆ ಆಸಕ್ತಿ & ಪ್ರೀತಿ ಹುಟ್ಟಿಸುವಂಥದ್ದಾಗಿದೆ. ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಆಗಬಾರದು? ಸರ್ಕಾರವೇ ಎಲ್ಲೆಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ’ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರ ಈಗಾಗಲೇ ಗಂಧದ ಗುಡಿ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡಿದೆ.

