HomeNewsಕನ್ನಡಿಗರಿಗಿದೋ ಸಿಹಿಸುದ್ದಿ! ಅಪ್ಪು 'ಗಂಧದಗುಡಿ'ಯಿಂದ ಬಂತು ಮಹತ್ತರ ಘೋಷಣೆ!

ಕನ್ನಡಿಗರಿಗಿದೋ ಸಿಹಿಸುದ್ದಿ! ಅಪ್ಪು ‘ಗಂಧದಗುಡಿ’ಯಿಂದ ಬಂತು ಮಹತ್ತರ ಘೋಷಣೆ!

‘ಕರ್ನಾಟಕ ರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನ ಇನ್ನೇನು ಸನ್ನಿಹಿತವಾಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯು ಕೂಡ ಅಭಿಮಾನಿಗಳು ತಮ್ಮ ಆರಾಧ್ಯ ದೈವನ ಜನ್ಮದಿನವನ್ನ ಅರ್ಥಗರ್ಭಿತವಾಗಿ ಆಚರಿಸಲು ಸಜ್ಜಾಗುತ್ತಿದ್ದಾರೆ. ಈ ಸಂಭ್ರಮಕ್ಕೆ ಇನ್ನಷ್ಟು ಮೆರಗು ನೀಡಿದ್ದಾರೆ ‘ಗಂಧದಗುಡಿ’ ಚಿತ್ರತಂಡ. ಅಪ್ಪು ಅಭಿನಯದ ಜನಮೆಚ್ಚಿದ ‘ಗಂಧದಗುಡಿ’ಯ ಓಟಿಟಿ ಬಿಡುಗಡೆಯ ದಿನಾಂಕವನ್ನ ಸದ್ಯ ಪಿ ಆರ್ ಕೆ ಸ್ಟುಡಿಯೋಸ್ ಹೊರಬಿಟ್ಟಿದ್ದಾರೆ.

ಪುನೀತ್ ರಾಜಕುಮಾರ್ ನಟಿಸಿದಂತಹ ಕೊನೆಯ ಸಿನಿಮಾ ‘ಗಂಧದಗುಡಿ’. ನಮ್ಮ ಕರುನಾಡಿನ ವನ್ಯ ಸಂಪತ್ತನ್ನು ಅತೀ ಸುಂದರವಾಗಿ ತೋರುವಂತಹ ಈ ಡಾಕ್ಯುಮೆಂಟರಿ ರೀತಿಯ ಚಿತ್ರವನ್ನ, ಒಂದು ಪೂರ್ಣ ಪ್ರಮಾಣದ ಸಿನಿಮಾವಾಗಿ ಬೆಳ್ಳಿತೆರೆ ಮೇಲೆ ತರುವುದು ಅಪ್ಪು ಅವರ ಕನಸಾಗಿತ್ತು. ಅಂತೆಯೇ 2022ರ ಅಕ್ಟೋಬರ್ 28ರಂದು ‘ಗಂಧದಗುಡಿ’ ಡಾಕ್ಯು-ಡ್ರಾಮಾ ಪರಿಯಲ್ಲಿ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಯಿತು. ಕನ್ನಡ ನಾಡಿನವರೆಲ್ಲರೂ ಅತ್ಯಂತ ಸಡಗರದಿಂದ ಈ ಸಿನಿಮಾವನ್ನ ಅಪ್ಪಿಕೊಂಡು ಒಪ್ಪಿಕೊಂಡರು. ಅಪ್ಪು ‘ಅಪ್ಪು’ವಾಗಿಯೇ ಕಾಣಿಸಿಕೊಂಡ ‘ಗಂಧದಗುಡಿ’ ಇದೀಗ ತನ್ನ ಓಟಿಟಿ ಪ್ರವೇಶಕ್ಕೆ ಸಜ್ಜಾಗಿದೆ. ಇದೇ ಮಾರ್ಚ್ 17ನೇ ತಾರೀಕಿನಂದು, ಪುನೀತ್ ರಾಜಕುಮಾರ್ ಅವರ ಜನ್ಮದಿನದಂದೇ ‘ಗಂಧದಗುಡಿ’ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಮನೆಮನೆಗಳನ್ನ, ಮಾನಮನಗಳನ್ನ ತಲುಪಲಿದೆ.

ವನ್ಯಜೀವನದ ವರ್ಗದಲ್ಲಿನ ತಮ್ಮ ಚಿತ್ರೀಕರಣಗಳ ಕೆಲಸದಿಂದ ಹೆಸರಾಗಿರುವ ಅಮೋಘವರ್ಷ ಜೆ ಎಸ್ ಅವರ ನಿರ್ದೇಶನದಲ್ಲಿ ಮೂಡಿಬಂದ ‘ಗಂಧದಗುಡಿ’ಗೆ, ಅಜನೀಶ್ ಲೋಕನಾಥ್ ಅವರ ಸಂಗೀತದ ಬಲವಿದೆ. ಪ್ರತೀಕ್ ಶೆಟ್ಟಿಯವರ ಛಾಯಾಗ್ರಹಣ ಪ್ರತಿಯೊಬ್ಬ ಸಿನಿಪ್ರೇಮಿಯ ಮನಗೆದ್ದಿದೆ. ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ, ಅರಣ್ಯ ಸಂಪತ್ತನ್ನು ಸಂಭ್ರಮಿಸಲು ಹೋರಾಡುವವರಾಗಿ ತಮ್ಮದೇ ಪಾತ್ರಗಳಲ್ಲಿ ಅಪ್ಪು ಅವರು ಹಾಗು ಅಮೋಘವರ್ಷ ಅವರು ಕಾಣಿಸಿಕೊಂಡಿದ್ದಾರೆ. ನಮ್ಮ ಕನ್ನಡನಾಡಿನ ವನ್ಯಜೀವನ, ಅಲ್ಲಿನ ವೈವಿಧ್ಯತೆ ಎಲ್ಲಕಿಂತ ಹೆಚ್ಚಾಗಿ ಬಹುಬೇಗ ನಮ್ಮನ್ನೆಲ್ಲ ಅಗಲಿದ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಸಾಗರದಷ್ಟು ಜನರು ಚಿತ್ರಮಂದಿರಗಳಲ್ಲಿ ಸೇರಿದ್ದರು. ಇದೇ ಮಾರ್ಚ್ 17ಕ್ಕೆ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬರುತ್ತಿರುವುದರಿಂದ ಮತ್ತೊಮ್ಮೆ ಮನೆಯಲ್ಲೇ ಕೂತು ತಮ್ಮ ಮನೆಮಗನಾದ ‘ಅಪ್ಪು’ ಅವರನ್ನ ಕಾಣುವಂತಹ ಸಂತಸ ಜಗತ್ತಿನಾದ್ಯಂತ ಸಿನಿಪ್ರೇಮಿಗಳಿಗೆ ಸಿಗಲಿದೆ.

RELATED ARTICLES

Most Popular

Share via
Copy link
Powered by Social Snap