ಕನ್ನಡ ಚಿತ್ರರಂಗದ ಡೈನಾಮಿಕ್ ಪ್ರಿನ್ಸ್ ಎಂದೇ ಪ್ರಖ್ಯಾತಿ ಪಡೆದಿರುವ ಯುವ ನಾಯಕನಟ, ಪ್ರಜ್ವಲ್ ದೇವರಾಜ್ ಅವರಿಗೆ ಇಂದು(ಜುಲೈ 4) ಜನ್ಮದಿನದ ಸಂಭ್ರಮ. ಈ ಸಂಭ್ರಮದ ರಂಗನ್ನು ಇನ್ನಷ್ಟು ಹೆಚ್ಚಿಸಲು ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ‘ಗಣ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪ್ರಜ್ವಲ್ ಅವರ ತಾಯಿ, ಹಿರಿಯ ನಟ ದೇವರಾಜ್ ಅವರ ಪತ್ನಿ ಚಂದ್ರಲೇಖ ಅವರು ಈ ಟೀಸರ್ ಬಿಡುಗಡೆ ಮಾಡಿದ್ದು ಇನ್ನೊಂದು ವಿಶೇಷ. ಈ ವೇಳೆ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ‘ಗಣ’ ತಂಡದ ಸದಸ್ಯರು ಮಾತನಾಡಿದರು.
ನಾಯಕ ಪ್ರಜ್ವಲ್ ದೇವರಾಜ್ ಅವರು, ಕನ್ನಡಿಗರ ಜೊತೆಗೆ ಸಿನಿಮಾ ಮಾಡಬೇಕು ಎಂದು ಆಸೆಯಿಟ್ಟು ಬಂದಂತಹ ಯುವ ನಿರ್ಮಾಪಕ ಪಾರ್ಥು ಅವರನ್ನ ಅಭಿನಂದಿಸುತ್ತ, “ನಾನು ಈ ವರೆಗೆ ಮಾಡಿದ ಸಿನಿಮಾಗಳಲ್ಲಿ ‘ಗಣ’ ವಿಭಿನ್ನ ಸಿನಿಮಾ. ಈವರೆಗೆ ನಾನು ಮಾಡಿರದಂತಹ ಪಾತ್ರ ಈ ಚಿತ್ರದಲ್ಲಿದೆ. 1993 ಹಾಗು 2023 ಎರಡು ಕಾಲಘಟ್ಟದಲ್ಲಿ ನಡೆಯುವ ಸಮಯದ ಜೊತೆಗಿನ ಸೆಣಸಾಟದ ಬಗೆಗಿನ ಸಿನಿಮಾ ಇದಾಗಿದೆ. ನನ್ನ ವೃತ್ತಿಯಲ್ಲೇ ಬೇಗ ಮುಗಿದಂತಹ ಸಿನಿಮಾ ‘ಗಣ’.ತಂಡದ ತಂತ್ರಜ್ಞರು, ನನ್ನೊಂದಿಗೆ ನಟಿಸಿರುವ ಕಲಾವಿದರು, ಎಲ್ಲರೂ ಕೂಡ ಉತ್ತಮ ಕೆಲಸವನ್ನ ಮಾಡಿದ್ದಾರೆ. ನಮ್ಮೀ ಪ್ರಯತ್ನಕ್ಕೆ ನಿಮ್ಮ ಸಹಾಕರವಿರಲಿ” ಎಂದರು.


ಇನ್ನು ಮೊದಲ ಬಾರೀ ನಿರ್ಮಾಣಕ್ಕಿಳಿದಿರುವ ಪಾರ್ಥು ಅವರು ಮಾತನಾಡಿ, “ಮೂಲತಃ ಐಟಿ ಹಿನ್ನೆಲೆಯ ನನಗೆ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಆಸೆಯಿತ್ತು. ಅಂತೆಯೇ ಈ ಸಿನಿಮಾ ನಿರ್ಮಾಣ ಮಾಡುವುದರ ಜೊತೆಗೆ, ನಟಿಸಿದ್ದೇನೆ ಕೂಡ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಜ್ವಲ್ ಅವರ ಅಭಿಮಾನಿಗಳು ಅವರಿಂದ ಯಾವ ರೀತಿಯ ಸಿನಿಮಾ ನಿರೀಕ್ಷಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಇದು ಅಂತದ್ದೇ ಸಿನಿಮಾ. ಪ್ರಜ್ವಲ್ ಅವರು ಈವೆರೆಗೆ ಮಾಡದೇ ಇರುವಂತಹ ಸಿನಿಮಾ ಎನ್ನಬಹುದು. ಹರಿಪ್ರಸಾದ್ ಜಕ್ಕ ಅವರು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಮುಗಿದಿದ್ದು, ಸ್ವಲ್ಪ ಮಟ್ಟಿಗಿನ ಪೋಸ್ಟ್ ಪ್ರೊಡಕ್ಷನ್ ಅಷ್ಟೇ ಬಾಕಿಯಿದೆ. ಶೀಘ್ರದಲ್ಲೇ ನಿಮ್ಮ ಮುಂದೆ ಸಿನಿಮಾ ಬರಲಿದೆ” ಎಂದರು.
‘ಗಣ’ ಟೀಸರ್ ಬಿಡುಗಡೆಯ ವೇಳೆ, ಡೈನಾಮಿಕ್ ಸ್ಟಾರ್ ದೇವರಾಜ್, ಅವರ ಪತ್ನಿ ಚಂದ್ರಲೇಖ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್, ಸಹೋದರ ಪ್ರಣಮ್ ದೇವರಾಜ್ ಕೂಡ ಉಪಸ್ಥಿತರಿದ್ದರು. ಜೊತೆಗೆ ಸಿನಿಮಾದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿರುವ ಕೃಷಿ ತಾಪಂಡ, ವೇದಿಕ, ಶಿವರಾಜ್ ಕೆ ಆರ್ ಪೇಟೆ, ಮಾಸ್ಟರ್ ರಘುನಂದನ್ ಅವರು ಕೂಡ ಹಾಜರಿದ್ದರು. ಇವರಷ್ಟೇ ಅಲ್ಲದೇ ತಂಡದ ತಂತ್ರಜ್ಞರಾದ ಛಾಯಾಗ್ರಾಹಕ ಜೈ ಆನಂದ್, ಸಂಗೀತ ನೀಡಿರುವ ಅನೂಪ್ ಸೀಳಿನ್, ಸಂಕಲನ ಮಾಡಿರುವ ಹರೀಶ್ ಕೊಮ್ಮೆ, ಕಲಾ ನಿರ್ದೇಶಕ ಸತೀಶ್ ಅವರು ಕೂಡ ಈ ವೇಳೆ ಕಂಡುಬಂದರು.

