ಭಟ್ – ಗಣಿ ಮ್ಯಾಜಿಕಲ್ ಕಾಂಬಿನೇಷನ್ ನ ‘ಗಾಳಿಪಟ-2’ ರಿಲೀಸ್ ಆಗಿದೆ.
ಗಾಳಿಪಟ ಮೊದಲ ಭಾಗ ನೋಡಿದವರಿಗೆ ‘ಗಾಳಿಪಟ-2’ ಒಂದು ಎಮೋಷನ್. ಚಿತ್ರದ ಪ್ರಿಮಿಯರ್ ಶೋ ಬಳಿಕದ ವಿಮರ್ಶೆ ಇಲ್ಲಿದೆ..


ಗಣಿ , ದಿಗಿ, ಭೂಷಣ್ ಈ ಮೂವರು ಸ್ನೇಹಿತರು ಒಟ್ಟಾಗಿ ಒಬ್ಬರನ್ನು ನೋಡಲು ಹೋಗುತ್ತಾರೆ. ಅದು ಅವರ ಜೀವನದ ಬಹು ಮುಖ್ಯ ವ್ಯಕ್ತಿ. ಆ ವ್ಯಕ್ತಿ ಹಿಂದೆ ಮೂವರ ಕಥೆಯೂ ಇದೆ. ಆ ಕಥೆಯೇನು? ಆ ವ್ಯಕ್ತಿ ಯಾರು ಎನ್ನುವುದು ಸಿನಿಮಾದಲ್ಲಿ ಬ್ಯೂಟಿಫುಲ್ & ಕಲರ್‌ಫುಲ್ ಜರ್ನಿ ಮೂಲಕ ಯೋಗರಾಜ್ ಭಟ್ ತೋರಿಸಿದ್ದಾರೆ.


ಶಾಲಾ – ಹಂತದ ಹರೆಯದ ಲೈಫ್ ಚಿತ್ರದಲ್ಲಿ ಗಮನ ಸೆಳೆಯುತ್ತದೆ. ಪಾಠ ಕೇಳುವಾಗಿನ ಮಸ್ತಿ, ಕ್ಯಾಂಪಸ್ ಸುತ್ತಾಟ, ಅತ್ತಿತ್ತ ನೋಟ ಇವೆಲ್ಲವೂ ನೋಡುಗರ ಮನಸ್ಸಿಗೆ ಮುದ ನೀಡುತ್ತದೆ.
ಅನಂತ್ ನಾಗ್ ಇಲ್ಲಿ ಮೇಷ್ಟ್ರು ಆಗಿದ್ದಾರೆ. ಅವರು ಅಕ್ಷರ ತಿದ್ದುವುದರೊಂದಿಗೆ ವಿದ್ಯಾರ್ಥಿಗಳ ಬದುಕನ್ನು ತಿದ್ದುವ ಪಾತ್ರವನ್ನು ಮಾಡಿದ್ದಾರೆ ಭಾವನೆ ತುಂಬಿದ ಅವರ ಸಂಭಾಷಣೆ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುತ್ತದೆ.
ನಟಿ ನಿಶ್ವಿಕಾ ನಾಯ್ಡು ವಿಶೇಷ ಪಾತ್ರದಲ್ಲಿ ಬಂದು ಹೋಗುತ್ತಾರೆ ಆದರೂ, ಅವರು ಚಿತ್ರದಲ್ಲಿ ನೆನಪು ಉಳಿಯುತ್ತಾರೆ.
ತುಂಟ ಗಣಿ, ಆ್ಯಗ್ರಿಮ್ಯಾನ್ , ಫನ್ನಿ ಹುಡುಗ ದಿಗಿ, ಅಮಾಯಕ ಭೂಷಣ್ ಈ ಮೂವರ ಸ್ನೇಹ ಸಂಬಂಧ ಮನಸ್ಸಿಗೆ ತಟ್ಟುತ್ತದೆ. ಜೀವನದಲ್ಲಿ ಏನೇ ಆದರೂ ನಗುತ್ತಿರಬೇಕು,ನೋವು ಮನದಲ್ಲಿ ಬಚ್ಚಿಡಬೇಕೆನ್ನುವಂತಹ ಪಾತ್ರದಲ್ಲಿ ಗಣೇಶ್ ಮತ್ತೊಮ್ಮೆ ಭೇಷ್ ಅನ್ನಿಸಿಕೊಂಡಿದ್ದಾರೆ.


ಚಿತ್ರದಲ್ಲಿ ರಂಗಾಯಣ ರಘು ಅಪ್ಪನಾಗಿ ಮಗನನ್ನು ಬೆದರಿಸುವುದು, ಪ್ರೀತಿ ತೋರಿಸುವುದು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ರಂಗಾಯಣ ರಘು ಹಾಗೂ ಅನಂತ್ ನಾಗ್ ಇಬ್ಬರು ಸ್ಕ್ರೀನ್ ನಲ್ಲಿ ತಮ್ಮ ನಟನೆ ಮೂಲಕ ಮನಸ್ಸಿಗೆ ಹತ್ತಿರವಾಗುತ್ತಾರೆ.
ಹಾಡುಗಳು ಪಾತ್ರಗಳ ಭಾವನೆಗೆ ತಕ್ಕ ಮೂಡಿ ಬಂದಿದೆ. ಮೂವರು ನಾಯಕಿಯರು ತಮ್ಮ ಬಬ್ಲಿ ಕ್ಯಾರೆಕ್ಟರ್ ನಿಂದ ಗಮನ ಸೆಳೆಯುತ್ತಾರೆ.
ಗಾಳಿಪಟ ಮೊದಲ ಭಾಗದ ರೀತಿ ಚಿತ್ರ ಇರದಿದ್ದರೂ, ಕೆಲ ದೃಶ್ಯಗಳು ಮೊದಲ ಭಾಗವನ್ನು ಕಣ್ಣ ಮುಂದೆ ತರುತ್ತದೆ.
ಗುರುವಿನ ಪಾಠ ಜೀವನಕ್ಕೂ ಮುಖ್ಯ ಎನ್ನುವುದನ್ನು ಚಿತ್ರದಲ್ಲಿ ಸಂದೇಶದ ಮೂಲಕ ತೋರಿಸಲಾಗಿದೆ.
ಟೋಟಲಿ ಇದೊಂದು ಪಕ್ಕಾ ಮನರಂಜನೆ ಭರಿತ ಚಿತ್ರ. ಎಮೋಷನ್ ಗಳನ್ನು ಹಿಡಿದುಕೊಳ್ಳುವ ಚಿತ್ರ. ವೀಕೆಂಡ್ ನಲ್ಲಿ ಚಿತ್ರ ನೋಡಲು ಮರೆಯದಿರಿ.

