ʼಸಂಕಷ್ಟಕರ ಗಣಪತಿ’,ʼನಮ್ ದುನಿಯಾ ನಮ್ ಸ್ಟೈಲ್’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿರುವ ಯುವ ನಟ ಲಿಖಿತ್ ಶೆಟ್ಟಿ ಈಗ ʼಫುಲ್ ಮೀಲ್ಸ್ʼ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ರೆಡಿಯಾಗಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಚಿತ್ರದ ಕುರಿತು ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಎನ್.ವಿನಾಯಕ ಇದೊಂದು ಸಂಪೂರ್ಣ ಮನೋರಂಜನಾತ್ಮಕ ಚಿತ್ರ. ನನ್ನ ಮೊದಲ ನಿರ್ದೇಶನದ ಚಿತ್ರ ಕೂಡ. ಲಿಖಿತ್ ಶೆಟ್ಟಿ ನಾಯಕರಾಗಿ, ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ ಸೇರಿದಂತೆ ಅನೇಕ ಅನುಭವಿ ಕಲಾವಿದರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮನೋಹರ್ ಜೋಷಿ ಛಾಯಾಗ್ರಹಣ ಹಾಗೂ ಗುರುಕಿರಣ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಬೆಂಗಳೂರು, ರಾಮನಗರ ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು.
ಯುವ ನಟ ಲಿಖಿತ್ ಶೆಟ್ಟಿ ಮಾತನಾಡಿ,ನಾನು ಈ ಚಿತ್ರದಲ್ಲಿ ಫೋಟೋಗ್ರಾಫರ್. ಮದುವೆ ಮನೆಗೆ ಫೋಟೋ ತೆಗೆಯಲು ಹೋದಾಗ ಮದುಮಗಳ ಮೇಲೆ ಪ್ರೀತಿಯಾಗುತ್ತದೆ. ಆನಂತರ ಏನಾಗುತ್ತದೆ? ಎಂಬುದನ್ನು ಚಿತ್ತದಲ್ಲೇ ನೋಡಬೇಕು. ಒಟ್ಟಿನಲ್ಲಿ ನಾವು ಇಡೀ ತಂಡ ಸೇರಿ ಪ್ರೇಕ್ಷಕರಿಗೆ ಮನೋರಂಜನೆಯ “ಫುಲ್ ಮೀಲ್ಸ್” ನೀಡಲಿದ್ದೇವೆ ಎಂದರು.
ನಾಯಕಿಯರಾದ ಖುಷಿ ರವಿ, ತೇಜಸ್ವಿನಿ ಶರ್ಮ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ಕಲಾವಿದರಾದ ರಂಗಾಯಣ ರಘು, ಚಂದ್ರಕಲಾ ಮೋಹನ್, ರಮೇಶ್ ಪಂಡಿತ್, ಗಣೇಶ್ ರಾವ್, ವಿಜಯ್ ಚೆಂಡೂರ್, ಛಾಯಾಗ್ರಾಹಕ ಮನೋಹರ್ ಜೋಶಿ ಹಾಗೂ ಸಂಭಾಷಣೆ ಬರೆಯುತ್ತಿರುವ ಹರೀಶ್ ರಾಜಣ್ಣ “ಫುಲ್ ಮೀಲ್ಸ್” ಬಗ್ಗೆ ಮಾತನಾಡಿದರು.



