HomeNewsಶಿವಣ್ಣ-ಉಪ್ಪಿ-ರಾಜ್ ತೆರೆಮೇಲೆ, ಅರ್ಜುನ್ ಜನ್ಯ ತೆರೆಯ ಹಿಂದೆ! ಮುಹೂರ್ತ ನೆರವೇರಿಸಿಕೊಂಡ ಬಹುನಿರೀಕ್ಷಿತ '45'

ಶಿವಣ್ಣ-ಉಪ್ಪಿ-ರಾಜ್ ತೆರೆಮೇಲೆ, ಅರ್ಜುನ್ ಜನ್ಯ ತೆರೆಯ ಹಿಂದೆ! ಮುಹೂರ್ತ ನೆರವೇರಿಸಿಕೊಂಡ ಬಹುನಿರೀಕ್ಷಿತ ’45’

‘ಸಂಗೀತ ಮಾಂತ್ರಿಕ’ ಎಂದೇ ಖ್ಯಾತಿ ಪಡೆದ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರು ಅರ್ಜುನ್ ಜನ್ಯ ಅವರು. ಸಂಗೀತ ನಿರ್ದೇಶಕರಾಗಿ ಅಪಾರ ಯಶಸ್ಸು ಕಂಡಿರುವ ಇವರು ಇದೀಗ ನಿರ್ದೇಶನಕ್ಕೆ ಇಳಿಯುತ್ತಿರುವುದು ತಿಳಿದಿರುವ ವಿಚಾರ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೆ ಸದ್ಯದ ಸೆನ್ಸೇಶನ್ ರಾಜ್ ಬಿ ಶೆಟ್ಟಿ ಎಂಬ ಮೂರು ಧೀಮಂತ ನಟರು ’45’ ಎಂಬ ವಿಶೇಷ ಶೀರ್ಷಿಕೆ ಇಡಲಾದ, ಅರ್ಜುನ್ ಜನ್ಯ ನಿರ್ದೇಶನದ ಮೊದಲ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಸೆಟ್ಟೇರುವ ಮುನ್ನವೇ ಇಷ್ಟೆಲ್ಲಾ ಸದ್ದು ಮಾಡಿ ಸುದ್ದಿಯಲ್ಲಿರುವ ’45’ ಸಿನಿಮಾದ ಮುಹೂರ್ತ ಇಂದು ಮೈಸೂರಿನಲ್ಲಿ ನಡೆಯಿತು. ದೇವರ ಮೇಲೆ ಚಿತ್ರೀಕರಿಸಿದ ಮೊದಲ ದೃಶ್ಯಕ್ಕೆ ಶ್ರೀಮತಿ ಗೀತಾ ಶಿವರಾಜಕುಮಾರ್ ಅವರು ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ಚಿತ್ರರಂಗದ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಅರ್ಜುನ್ ಜನ್ಯ, “ಚಿತ್ರೀಕರಣಕ್ಕೆ ಇಂದು ಚಾಲನೆ ಸಿಕ್ಕಿದೆಯಾದರೂ, ಸುಮಾರು ಒಂಬತ್ತು ತಿಂಗಳಿನಿಂದ ಪ್ರಿ-ಪ್ರೊಡಕ್ಷನ್ ಕೆಲಸ ನಡೆಸುತ್ತಲೇ ಇದ್ದೇವೆ. ಒಂದೊಳ್ಳೆ ಫಿಲೋಸೋಫಿಯನ್ನ ತುಂಬಾ ಸರಳವಾಗಿ, ಮಾಸ್ ಹಾಗು ಕ್ಲಾಸ್ ಸೇರಿಸಿ ಈ ಸಿನಿಮಾದಲ್ಲಿ ಹೇಳುವಂತಹ ಪ್ರಯತ್ನ ಮಾಡುತ್ತಿದ್ದೇವೆ. ಈ ಕಥೆಯನ್ನ ಮೊದಲು ಶಿವಣ್ಣನಿಗೆ ಹೇಳಿದಾಗ ನೀವೇ ಈ ಸಿನಿಮಾ ಮಾಡಿ ಎಂದು ಪ್ರೋತ್ಸಾಹಿಸಿದರು. ಅಂತೆಯೇ ಸಿನಿಮಾದ ಚಿತ್ರೀಕರಣ ಈಗ ಆರಂಭವಾಗಲಿದೆ “ಎಂದರು. ಇನ್ನು ಶಿವಣ್ಣ ಮಾತನಾಡಿ,”ಅರ್ಜುನ್ ಜನ್ಯ ಅವರು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಇದೊಂದು ಫಿಲೋಸೋಫಿಕಲ್ ಎಂಟರ್ಟೈನರ್ ಎನ್ನಬಹುದು. ಸುಮಾರು ಒಂದು ವರ್ಷದಿಂದ ಚಿತ್ರದ ಪ್ರಿ-ಪ್ರೊಡಕ್ಷನ್ ನಡೆಸಿ, ಕೊನೆಗೆ ಅನಿಮೇಷನ್ ಮೂಲಕ ಸಿನಿಮಾವನ್ನ ತೋರಿಸಿದರು. ತುಂಬಾ ಪ್ರಭುದ್ದವಾದ ಪಾತ್ರ ಸಿನಿಮಾದಲ್ಲಿದೆ. ಅರ್ಜುನ್ ಜನ್ಯ ಒಬ್ಬ ಪ್ರತಿಭಾವಂತ. ಈ ಚಿತ್ರದ ನಂತರ ದೇಶದ ಟಾಪ್ ನಿರ್ದೇಶಕರ ಪಟ್ಟಿಯನ್ನ ಅವರು ಪಡೆಯುತ್ತಾರೆ ಎಂಬ ನಂಬಿಕೆಯಿದೆ” ಎಂದು ಸಿನಿಮಾದ ಬಗ್ಗೆ, ಜನ್ಯ ಅವರ ಬಗ್ಗೆ ಪ್ರಶಂಸೆಯ ಮಾತನಾಡಿದರು.

ರಾಜ್ ಬಿ ಶೆಟ್ಟಿ ಅವರು ಈ ವೇಳೆ ಮಾತನಾಡುತ್ತಾ, “ಒಂದು ಸಿನಿಮಾಗಾಗಿ ನಾವು ಸಾಕಷ್ಟು ತಯಾರಿ ಮಾಡಿಕೊಳ್ಳುವುದರಿಂದ ನನ್ನ ತಂಡದ ಮೇಲೆ ನನಗೆ ತುಂಬಾ ಹೆಮ್ಮೆ ಇತ್ತು. ಆದರೆ ಅರ್ಜುನ್ ಜನ್ಯ ಅವರ ತಂಡದ ಕೆಲಸ ನೋಡಿ ಆಶ್ಚರ್ಯವಾಯಿತು. ಸಾಮಾನ್ಯವಾಗಿ ನಟನೊಬ್ಬನಿಗೆ ತಮ್ಮ ಸಿನಿಮಾದ ಬಗ್ಗೆ ನಿರ್ದೇಶಕರು ಹೇಳುವಾಗ ಕಥೆಯ ಒಂದು ಎಲೆಯನ್ನ ಹೇಳುತ್ತಾರೆ. ಆದರೆ ಅರ್ಜುನ್ ಜನ್ಯ ಅವರು ನನಗೆ ಒಂದು ಸಿನಿಮಾವನ್ನೇ ತೋರಿಸಿದರು. ಒಬ್ಬ ಪ್ರೇಕ್ಷಕನಾಗಿ, ನಟನಾಗಿ ಈ ಸಿನಿಮಾದ ಬಗ್ಗೆ ಬಾರೀ ಕುತೂಹಲ ಹಾಗು ನಿರೀಕ್ಷೆಯಿದೆ” ಎಂದರು.ಈ ಮಲ್ಟಿ ಸ್ಟಾರರ್ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆ ನಟಿ ಕೌಸ್ತುಭಾ ಮಣಿ ಬಣ್ಣ ಹಚ್ಚಲಿದ್ದಾರೆ.”ಮೊದಲ ಬಾರೀ ಇಷ್ಟು ಸ್ಟಾರ್ ನಟರು, ಇಷ್ಟು ದೊಡ್ಡ ತಂತ್ರಜ್ಞರ ಜೊತೆಗೇ ನಟಿಸುತ್ತಿರುವ ಸಂತಸವಿದೆ. ಬೋಲ್ಡ್ ಆಗಿರುವ ಹೀರೋಯಿನ್ ಪಾತ್ರ ನನ್ನದು” ಎಂದು ತಮ್ಮ ಸಂತಸ ವ್ಯಕ್ತಪಡಿಸಿದರು ಕೌಸ್ತುಭಾ ಮಣಿ. ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಮಾತನಾಡುತ್ತ, “ಅರ್ಜುನ್ ಜನ್ಯ ಅವರು ಶೂಟಿಂಗ್ ಆರಂಭಕ್ಕೂ ಮುನ್ನವೇ ನನಗೆ ಸಿನಿಮಾ ತೋರಿಸಿದ್ದರು. ಚಿತ್ರದ ಘೋಷಣೆಯಾಗಿ ಹಲವು ತಿಂಗಳಾದರೂ ನಿಧಾನವಾಗಿ ಸಾಗುತ್ತಿತ್ತು. ಈ ಬಗ್ಗೆ ಅರ್ಜುನ್ ಜನ್ಯ ಅವರನ್ನ ಕೇಳಿದಾಗ ಅವರೊಂದು ಅನಿಮೇಟೆಡ್ ಸಿನಿಮಾವನ್ನೇ ತೋರಿಸಿದರು. ನಾವು ಊಹಿಸಿಕೊಳ್ಳುತ್ತಿರುವದಕ್ಕಿಂತಲೂ ತುಂಬಾ ಚೆನ್ನಾಗಿ ಸಿನಿಮಾ ಎಂಬ ನಂಬಿಕೆಯಿದೆ” ಎಂದರು.

ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲೂ ಬರಲಿರುವ ಈ ಸಿನಿಮಾದ ಚಿತ್ರೀಕರಣ ಬೆಂಗಳೂರು, ಮೈಸೂರು ಭಾಗದಲ್ಲಿ 80 ದಿನಗಳ ಕಾಲ ನಡೆಸುವ ಯೋಜನೆಯಿದೆ ಚಿತ್ರತಂಡದ್ದು. ಅರ್ಜುನ್ ಜನ್ಯ ಅವರು ನಿರ್ದೇಶನದ ಜೊತೆಗೇ ಸಂಗೀತ ಕೂಡ ನೀಡಲಿದ್ದಾರೆ. ‘ಗಾಳಿಪಟ 2’ ನಿರ್ಮಾಣ ಮಾಡಿದಂತಹ ರಮೇಶ್ ರೆಡ್ಡಿ ಅವರು ‘ಸೂರಜ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಈ ’45’ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಾಹಣ, ಅನಿಲ್ ಕುಮಾರ್ ಸಂಭಾಷಣೆ, ಕೆ ಎಂ ಪ್ರಕಾಶ್ ಸಂಕಲನ ಸಿನಿಮಾದಲ್ಲಿರಲಿದ್ದು, ಪ್ರಖ್ಯಾತ ನಟರ ಜೊತೆಗೇ ಪ್ರಸಿದ್ಧ ತಂತ್ರಜ್ಞರು ಕೂಡ ತಂಡದಲ್ಲಿದ್ದಾರೆ. ಬಹುನಿರೀಕ್ಷಿತವಾಗಿರುವ ಈ ಚಿತ್ರವನ್ನ 2024ಕ್ಕೆ ತೆರೆಮೇಲೆ ತರುವ ಯೋಜನೆ ಚಿತ್ರತಂಡದ್ದು.

RELATED ARTICLES

Most Popular

Share via
Copy link
Powered by Social Snap