ಸ್ಯಾಂಡಲ್ ವುಡ್ ನಿರ್ದೇಶಕ ದುನಿಯಾ ಸೂರಿ ʼಬ್ಯಾಡ್ ಮ್ಯಾನರ್ಸ್ʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಹು ನಿರೀಕ್ಷಿತ ಚಿತ್ರ ಈಗಾಗಲೇ ಡಬ್ಬಿಂಗ್ ಮುಗಿಸಿದೆ.
ನಿರ್ದೇಶಕ ದುನಿಯಾ ಸೂರಿ ಸೋಶಿಯಲ್ ಮೀಡಿಯಾದಲ್ಲಿ ಅಷ್ಟು ಸಕ್ರಿಯವಾಗಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರು ಹೊಂದಿರುವುದು ಇನ್ಸ್ಟಾಗ್ರಾಮ್ ಅಕೌಂಡ್ ಮಾತ್ರ. ಆದರೆ ಅವರ ಹೆಸರಿನಲ್ಲಿ ಯಾರೋ ಫೇಸ್ ಬುಕ್, ಟ್ವಿಟರ್ ನಕಲಿ ಖಾತೆಯನ್ನು ತೆರೆದಿದ್ದಾರೆ. ಇದು ಸೂರಿ ಮನಸ್ಸಿಗೆ ಬೇಸರವನ್ನು ತಂದಿದೆ ಈ ಕಾರಣಕ್ಕಾಗಿ ಅವರು ಸೈಬರ್ ಠಾಣೆಗೆ ದೂರು ನೀಡಲು ನಿರ್ಧರಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಅವರು, ‘ಎಲ್ಲರಿಗೂ ನಮಸ್ಕಾರ, ನಾನು ಕನ್ನಡ ಚಲನಚಿತ್ರ ನಿರ್ದೇಶಕ ಸೂರಿ (ಸುರೇಶ್ ರಾಮಸ್ವಾಮಿ) ಇನ್ ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವ ರೀತಿಯ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲೂ ನಾನು ಇಲ್ಲ. ಟ್ವಿಟ್ಟರ್‌ನಲ್ಲಿ ದುನಿಯಾ ಸೂರಿ ಎಂಬ ಅಕೌಂಟ್ ನನ್ನದಲ್ಲ.
ಈ ನಡುವೆ ಟ್ವಿಟ್ಟರ್ ಅಕೌಂಟ್‌ನಲ್ಲಿ ಅಪ್ಡೇಟ್ ಆಗುತ್ತಿರುವ ಯಾವ ಅನಿಸಿಕೆಯೂ, ಅಭಿಪ್ರಾಯ ಮತ್ತು ಸಮಾಜದ ಆಗುಹೋಗುಗಳು ನನ್ನದಲ್ಲ. ಕಾನೂನು ಪ್ರಕಾರ ನನ್ನ ಫೋಟೋ ಹಾಗೂ ನನ್ನ ಹೆಸರನ್ನು ನನ್ನ ಅನುಮತಿ ಇಲ್ಲದೇ ಬಳಸುವುದು ಅಪರಾಧ.
ದಯವಿಟ್ಟು ಇದನ್ನು ನಿಲ್ಲಿಸಿ, ಸೈಬರ್ ಕ್ರೈಂಗೆ ಈ ಹಿಂದೆ ಫೇಕ್ ಅಕೌಂಟ್ಸ್ ಹಾಗೂ ಫೇಕ್ ಆಡಿಷನ್‌ಗಳ ಬಗ್ಗೆ ನಾನು ದೂರು ನೀಡಿದ್ದೇನೆ. ಈಗ ಈ ಟ್ವಿಟ್ಟರ್‌ನ ಫೇಕ್ ಖಾತೆ ಬಗ್ಗೆಯೂ ದೂರು ನೀಡುತ್ತೇನೆ. ನನ್ನ ಕೆಲಸದ ನಡುವೆ ಈ ರೀತಿಯ ವಿಚಾರವು ನನ್ನ ಮನಸ್ಸಿಗೆ ಬಹಳ ನೋವು ಉಂಟು ಮಾಡಿದೆ” ಎಂದಿದ್ದಾರೆ.

