ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸದ್ಯ ಸ್ಯಾಂಡಲ್ವುಡ್ ನ ಅತ್ಯಂತ ಬ್ಯುಸಿ ನಟ ಎಂದರೆ ತಪ್ಪಾಗದು. ಇವರಿಗೆ ವಯಸ್ಸಾಗಿದೆ ಎಂದು ಬೇರೆಯವರಷ್ಟೇ ಹೇಳಬೇಕೇ ಹೊರತು, ಅವರನ್ನ ನೋಡುವವರಿಗೆ, ಅವರ ಸಿನಿಮಾಗಳನ್ನ ನೋಡುವವರಿಗೆ, ಜೊತೆಗೇ ಅವರ ಕಾರ್ಯವೈಖರಿ ನೋಡುವವರಿಗೆ ಖಂಡಿತ ಹಾಗನ್ನಿಸುವ ಸಾಧ್ಯತೆಯೇ ಇಲ್ಲ. ಹಲವು ಹಿಟ್ ಸಿನಿಮಾಗಳನ್ನ ನೀಡಿರುವ ಶಿವಣ್ಣನ ಬಳಿ ಈಗಲೂ ಕೂಡ ಕೈತುಂಬಾ ಸಿನಿಮಾಗಳು ಸಿದ್ದವಿದ್ದು, ಎಲ್ಲದರದ್ದು ಬಿರುಸಿನ ಕೆಲಸ ನಡೆಯುತ್ತಿದೆ. ಸದ್ಯ ಇವುಗಳಲ್ಲಿ ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಸದ್ಯ ಶಿವರಾಜ್ ಕುಮಾರ್ ಅವರು ಒಂದಿಷ್ಟು ಮಾಹಿತಿ ಹೊರಹಾಕಿದ್ದಾರೆ.
ಶಿವಣ್ಣ ಪತ್ನಿ ಗೀತಾ ಶಿವರಾಜಕುಮಾರ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ಬಗ್ಗೆ ಹಾಗು, ಚುನಾವಣಾ ಪ್ರಚಾರ ಕಾರ್ಯದಲ್ಲಿ ತಾವೂ ಕೂಡ ಪಾಲ್ಗೊಳ್ಳುತ್ತಿರುವ ಬಗ್ಗೆ ಮಾತನಾಡಲು, ಸ್ವತಃ ಶಿವಣ್ಣ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು. ಇದೇ ವೇಳೆ ಈ ಸಿನಿಮಾಗಳ ಬಗ್ಗೆ ಪ್ರಶ್ನೆ ಕೇಳಿದಾಗ ಚುಟುಕು ಮಾಹಿತಿ ನೀಡಿದ್ದಾರೆ ಹ್ಯಾಟ್ರಿಕ್ ಹೀರೋ.
ಈಗಾಗಲೇ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಕಂಡಂತಹ ‘ಕಬ್ಜ’ ಸಿನಿಮಾದ ಮುಂದುವರೆದ ಭಾಗ ‘ಕಬ್ಜ 2’ ಮಾಡುತ್ತಿರುವುದಾಗಿ ಚಿತ್ರದ ನಿರ್ದೇಶಕ ನಿರ್ಮಾಪಕ ಆರ್ ಚಂದ್ರು ಅವರು ಹೇಳಿಕೊಂಡಿದ್ದಾರೆ. ‘ಕಬ್ಜ’ ಚಿತ್ರದ ಅಂತ್ಯದ ಕೆಲವು ಕ್ಷಣಗಳಿಗಾಗಿ ಒಂದು ಪ್ರಮುಖ ಪಾತ್ರವಾಗಿ ಶಿವರಾಜಕುಮಾರ್ ಅವರು ಕಾಣಿಸಿಕೊಂಡಿದ್ದರಿಂದಾಗಿ ‘ಕಬ್ಜ 2′ ಶಿವಣ್ಣನದೇ ಪಾತ್ರದ ಕಥೆಯಾಗಿರಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ಕೇಳುತ್ತ,’ಕಬ್ಜ 2’ ಬಗ್ಗೆ ಕೇಳಿದಾಗ, ಅದಕ್ಕೆ ಪ್ರತಿಕ್ರಯಿಸಿದ ಶಿವಣ್ಣ, “ನಾನಿನ್ನು ಕಬ್ಜ 2 ಸಿನಿಮಾದ ಕಥೆ ಕೇಳಿಲ್ಲ, ಸದ್ಯ ಭೈರತಿ ರಣಗಲ್ ಮೇಲೆ ಹೆಚ್ಚಿನ ಗಮನವಿದೆ” ಎಂದು ಉತ್ತರಿಸಿದ್ದಾರೆ.
‘ಭೈರತಿ ರಣಗಲ್’ ಎನ್ನುವುದು, ಶಿವಣ್ಣ ಹಾಗು ನಿರ್ದೇಶಕ ನರ್ತನ್ ಕಾಂಬಿನೇಶನ್ ನಲ್ಲಿ, ಶ್ರೀಮುರಳಿ ಕೂಡ ನಟಿಸಿರುವ ಬಹುಪ್ರಶಂಸಿತ ಸಿನಿಮಾ ‘ಮಫ್ತಿ’ಯ ಪ್ರೀಕ್ವೆಲ್. ಈ ಸಿನಿಮಾವನ್ನ ಸ್ವತಃ ಶಿವರಾಜಕುಮಾರ್ ಅವರೇ ನಿರ್ಮಾಣ ಮಾಡುತ್ತಿದ್ದು, ನರ್ತನ್ ನಿರ್ದೇಶನ ಮಾಡುತ್ತಿರುವುದು ತಿಳಿದಿರುವ ವಿಚಾರ. ‘ಮಫ್ತಿ’ ಸಿನಿಮಾದಲ್ಲಿನ ಶಿವಣ್ಣನ ‘ಭೈರತಿ ರಣಗಲ್’ ಪಾತ್ರದ ಮೇಲೆಯೇ ಈ ಸಂಪೂರ್ಣ ಸಿನಿಮಾ ಮೂಡಿಬರಲಿರುವುದರಿಂದ, ಪ್ರಸ್ತುತ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆ ಸಿನಿಪ್ರಿಯರಿಗಿದೆ. ಇದನ್ನೇ ಶಿವಣ್ಣ ಕೂಡ ಹೇಳಿಕೊಂಡಿದ್ದಾರೆ. ಇನ್ನು ಶಿವರಾಜಕುಮಾರ್ ನಟಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಸಿನಿಮಾವೆಂದರೆ, ಅದು ‘ಬೀರಬಲ್’ ಖ್ಯಾತಿಯ ಶ್ರೀನಿ ಆಕ್ಷನ್ ಕಟ್ ಹೇಳುತ್ತಿರುವ ‘ಘೋಸ್ಟ್’ ಚಿತ್ರ. ಸಿನಿಪ್ರೇಮಿಗಳಲ್ಲಿ ಅಪಾರ ನಿರೀಕ್ಷೆ ಹಾಗು ಕುತೂಹಲ ಹುಟ್ಟಿಸಿರುವ ಈ ಚಿತ್ರದ ಬಗ್ಗೆ ಕೇಳಿದಾಗ ಶಿವಣ್ಣ, “ಘೋಸ್ಟ್ ಕನ್ನಡ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಒಂದೊಳ್ಳೆ ಸಿನಿಮಾ ಆಗಲಿದೆ ಎಂಬ ನಂಬಿಕೆಯಿದೆ. ಈ ಸಿನಿಮಾದ ಬಗ್ಗೆ ಅತೀ ಆಸೆ ಪಡ್ತಿದ್ದೀನೇನೋ ಗೊತ್ತಿಲ್ಲ” ಎಂದಿದ್ದಾರೆ.
ಒಟ್ಟಿನಲ್ಲಿ ಅಂದಿನಿಂದ ಇಂದಿನವರೆಗೂ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗೇ ಇರುವಂತಹ ಶಿವರಾಜಕುಮಾರ್ ಅವರು ಇವುಗಳಷ್ಟೇ ಅಲ್ಲದೇ ರಜನಿಕಾಂತ್ ಜೊತೆಗಿನ ‘ಜೈಲರ್’, ಡಾಲಿ ಜೊತೆಗಿನ ‘ಉತ್ತರಾಕಾಂಡ’, ಧನುಷ್ ಜೊತೆಗಿನ ‘ಕ್ಯಾಪ್ಟನ್ ಮಿಲ್ಲರ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯದಲ್ಲೇ ಬರಲಿರುವಂತಹ, ಅಥವಾ ಸದ್ಯ ಕೆಲಸದಲ್ಲಿರುವಂತಹ ಬಹುನಿರೀಕ್ಷಿತ ಸಿನಿಮಾಗಳ ಬಗ್ಗೆ ಹೀಗೆ ಚಿಕ್ಕ ಚಿಕ್ಕ ವಿಚಾರ ಹಂಚಿಕೊಂಡಿದ್ದಾರೆ.

