ಹೆಸರಾಂತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್ ಮಂಜು ನಾಯಕನಟನಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಹೆಸರು ಮಾಡುತ್ತಿದ್ದಾರೆ. ‘ಪಡ್ಡೆಹುಲಿ’ ಹಾಗು ‘ರಾಣ’ ಸಿನಿಮಾಗಳ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ಇದೀಗ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಸ್ಯಾಂಡಲ್ವುಡ್ ಸೀನಿಯರ್ ಗಳ ಶುಭ ಹಾರೈಕೆಗಳೊಂದಿಗೆ ಈ ಹೊಸ ಸಿನಿಮಾ ಸೆಟ್ಟೇರಿದ್ದು, ಚಿತ್ರಕ್ಕೆ ‘ದಿಲ್ ದಾರ್’ ಎಂದು ಹೆಸರಿಡಲಾಗಿದೆ.
‘ದುರ್ಗಾ’,’ನೀಲಿ’ ಧಾರಾವಾಹಿಗಳ ಜೊತೆಗೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಮಧು ಗೌಡ ಗಂಗೂರು ಅವರು ‘ದಿಲ್ ದಾರ್’ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕ್ಲಾಪ್ ಮಾಡಿ, ಸಿನಿಮಾದ ಶೀರ್ಷಿಕ ಅನಾವರಣ ಮಾಡಿದ್ದು, ಚಿತ್ರತಂಡಕ್ಕೆ ಉತ್ಸಾಹ ತುಂಬಿದ್ದಾರೆ. “ಸಿನಿಮಾ ಮಾಡಬೇಕು ಅಂದರೇ ದಿಲ್ ಬೇಕು. ನಟ ಶ್ರೇಯಸ್ ಮಂಜು ಹಾಗು ಇಡೀ ಚಿತ್ರತಂಡಕ್ಕೆ ಶುಭವಾಗಲಿ” ಎಂದಿದ್ದಾರೆ. ಜೊತೆಗೆ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಕ್ಯಾಮೆರಾಗೆ ಚಾಲನೆ ನೀಡಿ ಶುಭ ಹಾರೈಸಿದರು.
ಈ ಬಗ್ಗೆ ಮಾತನಾಡುವ ನಿರ್ದೇಶಕ ಮಧು ಗೌಡ, “ಈ ಕಥೆ ರೆಡಿ ಮಾಡಿ, ‘ದಿಲ್ ದಾರ್’ ಎಂಬ ಟೈಟಲ್ ಕೂಡ ಫಿಕ್ಸ್ ಮಾಡಿದ ಮೇಲೆ ಇದಕ್ಕೆ ಸರಿಹೊಂದುವವರು ಯಾರು ಎಂದು ಹುಡುಕುವಾಗ ಸಿಕ್ಕಿದ್ದೇ ಶ್ರೇಯಸ್ ಮಂಜು ಅವರು. ಈ ಚಿತ್ರ ನನ್ನೊಬ್ಬನಿಂದ ಅಲ್ಲ, ಇಡೀ ತಂಡದ ಕಾರಣದಿಂದಾಗಿ ಸಾಧ್ಯವಾಗಿದೆ ” ಎಂದಿದ್ದಾರೆ. ಇನ್ನು ನಾಯಕ ಶ್ರೇಯಸ್ ಮಂಜು ಅವರು ಮಾತನಾಡಿ, “ನಮಗೆ ನಮ್ಮ ಸಿನಿಮಾಗೆ ಶುಭಹಾರೈಸಲು ಬಂದ ಪ್ರತಿಯೊಬ್ಬ ಹಿರಿಯ ನಿರ್ದೇಶಕರಿಗೂ, ಕಲಾವಿದರಿಗೂ ಧನ್ಯವಾದಗಳು. ರವಿಚಂದ್ರನ್ ಸರ್ ನನಗೆ ತುಂಬಾ ಆತ್ಮವಿಶ್ವಾಸ ತುಂಬಿದ್ದಾರೆ. ಇಲ್ಲಿನ ಪ್ರತಿಯೊಬ್ಬ ನಿರ್ದೇಶಕನಿಂದಲೂ ಒಂದೊಂದು ಟಿಪ್ಸ್ ಪಡೆಯುತ್ತೇನೆ” ಎಂದರು.
ಶ್ರೇಯಸ್ ಮಂಜು ಅವರಿಗೆ ನಾಯಕಿಯಾಗಿ ಪ್ರಿಯಾಂಕಾ ಆಯ್ಕೆಯಾಗಿದ್ದಾರೆ. “ನಾನು ಈ ಹಿಂದೆ ಅದ್ದೂರಿ ಲವರ್ ಹಾಗು ‘ಬ್ಯಾಡ್ ಮ್ಯಾನರ್ಸ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದೇನೆ. ಈಗ ‘ದಿಲ್ ದಾರ್’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದೇನೆ. ನಿಮ್ಮೆಲ್ಲ ಆಶೀರ್ವಾದ ಬೇಕು” ಎಂದಿದ್ದಾರೆ. ಈ ‘ದಿಲ್ ದಾರ್’ ಚಿತ್ರವನ್ನು ಆರ್ ಸಂತೋಷ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದು, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಅವರ ಸಂಗೀತ ಹಾಗು ಗಗನ್ ಗೌಡ ಅವರ ಛಾಯಾಗ್ರಾಹಣ ಚಿತ್ರದಲ್ಲಿರಲಿದೆ. ಸದ್ಯ ಶ್ರೇಯಸ್ ಮಂಜು ಅವರ ಮೂರನೇ ಸಿನಿಮಾ ಪ್ರಿಯಾ ವಾರಿಯರ್ ಅವರ ಜೊತೆ ನಟಿಸುತ್ತಿರುವ ‘ವಿಷ್ಣು ಪ್ರಿಯಾ’ ಬಿಡುಗಡೆಗೆ ಸಿದ್ದವಾಗಿದ್ದು, ಆ ಸಿನಿಮಾ ಬಿಡುಗಡೆಗೂ ಮುನ್ನವೇ ನಾಲ್ಕನೇ ಚಿತ್ರ ಸೆಟ್ಟೇರಿದೆ. ಸದ್ಯ ಚಿತ್ರೀಕರಣ ಪೂರ್ವದ ಅಭ್ಯಾಸಗಳು ನಡೆಯುತ್ತಿದ್ದು, ರಿಹರ್ಸಲ್ ಮುಗಿಸಿಕೊಂಡು ಸಿನಿಮಾದ ಶೂಟಿಂಗ್ ಆರಂಭ ಮಾಡಲಿದ್ದಾರೆ.

