ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಹಾಗು ಕನ್ನಡದ ಹೆಮ್ಮೆಯ ನಿರ್ದೇಶಕ ಪವನ್ ಕುಮಾರ್ ಅವರು ಜೊತೆಯಾಗಿ ಸೇರಿ ಮಾಡಿದಂತಹ ಸಿನಿಮಾ ‘ಧೂಮಂ’ ಇನ್ನೇನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗುತ್ತಿದೆ. ಮಲಯಾಳಂ ನ ಸ್ಟಾರ್ ನಟ ಫಹಾದ್ ಫಾಸಿಲ್ ಹಾಗು ಅಪರ್ಣ ಬಾಲಮುರುಳಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾ ನಾಳೆ(ಜೂನ್ 23) ಎಲ್ಲೆಡೆ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾದ ಟ್ರೈಲರ್ ಕನ್ನಡ ಸೇರಿದಂತೆ ಮಲಯಾಳಂ, ಹಿಂದಿ ತೆಲುಗು ಹಾಗು ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಆದರೀಗ ಕನ್ನಡ ಟ್ರೈಲರ್ ನಲ್ಲಿ ವಿಶೇಷ ಬದಲಾವಣೆ ಮಾಡಲಾಗಿದೆ. ನಾಯಕ ಫಹಾದ್ ಫಾಸಿಲ್ ಅವರ ಪಾತ್ರದ ಕನ್ನಡ ಡಬ್ಬಿಂಗ್ ನ ಧ್ವನಿಯನ್ನ ಬದಲಾಯಿಸಲಾಗಿದೆ.
ಬಿಡುಗಡೆಯದಂತಹ ‘ಧೂಮಂ’ ಟ್ರೈಲರ್ ನಲ್ಲಿರುವಂತಹ ಫಹಾದ್ ಅವರ ಪಾತ್ರದ ಧ್ವನಿ ಇಷ್ಟವಾಗಿಲ್ಲ, ಸರಿಯಾಗಿ ಹೊಂದಿಕೊಳ್ಳುವುದಿಲ್ಲ ಎಂಬ ಹಲವು ಮಾತುಗಳು ಕನ್ನಡಿಗರಿಂದ ಕೇಳಿಬಂದಿತ್ತು. ಈ ಮಾತುಗಳು ಹೊಂಬಾಳೆ ಫಿಲಂಸ್ ಅಂಗಳದ ವರೆಗೂ ತಲುಪಿದ್ದು, ಸದ್ಯ ಹೊಂಬಾಳೆ ತಾವು ಬಿಡುಗಡೆ ಮಾಡಿರುವ ಟ್ರೈಲರ್ ನಲ್ಲಿನ ಫಹಾದ್ ಫಾಸಿಲ್ ಅವರ ಧ್ವನಿಯನ್ನ ಬದಲಾಯಿಸಿದೆ. ಇಡೀ ಚಿತ್ರದಲ್ಲಿ ಕೂಡ ಈ ಹೊಸ ಧ್ವನಿಯೇ ಇರಲಿದೆಯಂತೆ. ಈ ಬಗ್ಗೆ ಸಿನಿಮಾದ ನಿರ್ದೇಶಕ ಪವನ್ ಕುಮಾರ್ ಅವರು ಇನ್ಸ್ಟಾಗ್ರಾಮ್ ಲೈವ್ ಬರುವ ಮೂಲಕ


ಹಂಚಿಕೊಂಡಿದ್ದಾರೆ.
“ನಾನು ಇಲ್ಲಿಯವರೆಗೂ ‘ಧೂಮಂ’ ಸಿನಿಮಾವನ್ನ ಮಲಯಾಳಂ ನಲ್ಲೆ ನೋಡಿದ್ದೇ. ಆದರೆ ಈಗ ಕನ್ನಡ ಅವತರಣಿಕೆಯನ್ನ ಸಂಪೂರ್ಣ ನೋಡಿದೆ. ಇದು ಕನ್ನಡ ಡಬ್ಬಿಂಗ್ ಅನಿಸದೆ ಒಂದು ಕನ್ನಡದ್ದೆ ಸಿನಿಮಾ ಎಂದೇನಿಸುತ್ತದೆ. ಡಬ್ಬಿಂಗ್ ಚೆನ್ನಾಗಿರಲ್ಲ, ಕನ್ನಡದಲ್ಲಿ ನೋಡಲಾಗುವುದಿಲ್ಲ ಎಂದು ನೀವಂದು ಕೊಂಡಿದ್ದರೆ ಈ ಸಲ ಹಾಗಿಲ್ಲ. ಡಬ್ಬಿಂಗ್ ತುಂಬಾ ಉತ್ತಮವಾಗಿ ಮೂಡಿಬಂದಿದೆ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಕನ್ನಡದಲ್ಲಿಯೇ ನಮ್ಮ ‘ಧೂಮಮ್’ ಸಿನಿಮಾವನ್ನ ನೋಡಿ” ಎಂದಿದ್ದಾರೆ ಪವನ್ ಕುಮಾರ್.
ಮೂಲತಃ ಕನ್ನಡದಲ್ಲಿ ಸಿದ್ದವಾದ ಕಥೆಯಾದ ‘ಧೂಮಂ’ ಅನ್ನು ಫಹಾದ್ ಫಾಸಿಲ್ ಹಾಗು ಇತರ ಮಲಯಾಳಂ ನಟರ ಆಯ್ಕೆಯಿಂದ ಮಲಯಾಳಂನಲ್ಲೆ ಮೂಲವಾಗಿ ಸಿದ್ದಪಡಿಸಲಾಯಿತು. ನಂತರ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ದವಾಗಿರುವ ಚಿತ್ರತಂಡ, ನಾಳೆ(ಜೂನ್ 23) ಎಲ್ಲೆಡೆ, ಎಲ್ಲಾ ಭಾಷೆಗಳಲ್ಲೂ ಏಕಕಾಲದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ.



