‘ಲೂಸಿಯ’ ಸಿನಿಮಾದ ಮೂಲಕ ಎಲ್ಲೆಡೆ ಸಂಚಲನ ಮೂಡಿಸಿದ್ದ ಕನ್ನಡದ ಹೆಮ್ಮೆಯ ನಿರ್ದೇಶಕ ಪವನ್ ಕುಮಾರ್ ಅವರು. ನಂತರ ‘ಯು ಟರ್ನ್’ ಎಂಬ ಇನ್ನೊಂದು ಪ್ರಭುದ್ಧ ಸಿನಿಮಾ ಮಾಡಿ ಎಲ್ಲರ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರಾದರು. ಇದೀಗ ಪವನ್ ಕುಮಾರ್ ಅವರಿಂದ ಬರುತ್ತಿರುವ ಹೊಸ ಚಿತ್ರ ‘ಧೂಮಮ್’. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ, ಕೆಜಿಎಫ್ ಮೂಲಕ ಪ್ರಪಂಚಕ್ಕೆ ಪರಿಚಿಗೊತ್ತಿರುವತವಾದ ಹೊಂಬಾಳೆ ಫಿಲಂಸ್ ಈ ‘ಧೂಮಮ್’ ಸಿನಿಮಾವನ್ನ ನಿರ್ಮಾಣ ಮಾಡುತ್ತಿರುವುದು ಗೊತ್ತಿರುವ ವಿಚಾರ. ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್, ನಟಿ ಅಪರ್ಣ ಬಾಲಮುರಳಿ, ಕನ್ನಡಿಗ ಅಚ್ಯುತ್ ಕುಮಾರ್ ಹಾಗು ಇನ್ನಿತರ ಪ್ರಖ್ಯಾತ ನಟರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರ, ಈ ಶುಕ್ರವಾರ ಅಂದರೇ ಜೂನ್ 23ರಂದು ಎಲ್ಲೆಡೆ ಬಿಡುಗಡೆಯಾಗುತ್ತಿದೆ.
ಈ ಬಿಡುಗಡೆಗೆ ಅಂಟಿಕೊಂಡೇ ಇನ್ನೊಂದು ಸುದ್ದಿ ಹಬ್ಬಿತ್ತು. ಜೂನ್ 23ರಂದು ಕೇವಲ ‘ಧೂಮಮ್’ ಚಿತ್ರದ ಮಲಯಾಳಂ ಆವೃತ್ತಿ ಮಾತ್ರ ತೆರೆಕಾಣಲಿದೆ. ಕನ್ನಡ ಇನ್ನೂ ತಡವಾಗಿ ಬರಲಿದೆ ಎಂದು ಕೆಲವರು ಹೇಳಿದರೆ, ಕನ್ನಡದಲ್ಲಿ ಈ ಸಿನಿಮಾ ಬರುವುದೇ ಇಲ್ಲ, ಇದೊಂದು ಮಲಯಾಳಂ ಸಿನಿಮಾ ಎಂಬ ಮಾತುಗಳನ್ನ ಆಡುತ್ತಿದ್ದರು. ಆದರೆ ಈ ಎಲ್ಲಾ ಮಾತುಗಳಿಗೆ, ಅನುಮಾನಗಳಿಗೆ ಹೊಂಬಾಳೆ ಸಂಸ್ಥೆ ತಮ್ಮ ಒಂದು ಟ್ವೀಟ್ ನ ಮೂಲಕ ತೆರೆ ಎಳೆದಿದ್ದಾರೆ. “ನಿಲ್ಲಲೇ ಬೇಕು ಎಲ್ಲ ದಿಮಾಕು. ಕಾಲಪುರುಷನ ಕಾಲಿನ ಕೆಳಗೆ” ಎಂದು ಬರೆದ ಟ್ವೀಟ್ ನಲ್ಲಿ ‘ಧೂಮಮ್’ ಕನ್ನಡದಲ್ಲಿ ಇದೇ ಜೂನ್ 23ರಂದು ಬಿಡುಗಡೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಇದರಿಂದ ಅಪಾರ ಕನ್ನಡದ ಸಿನಿಪ್ರೇಮಿಗಳಿಗೆ ಸಂತಸ ತಂದಿದೆ.
ಮೂಲಗಳ ಪ್ರಕಾರ ‘ಧೂಮಮ್’ ಚಿತ್ರದ ಕನ್ನಡ ಅವತಾರಣಿಕೆಯ ಡಬ್ಬಿಂಗ್ ಪ್ರಕ್ರಿಯೆ ಮರಳಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ‘ಧೂಮಮ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಇದೊಂದು ಥ್ರಿಲರ್ ಡ್ರಾಮಾ ರೀತಿಯ ಸಿನಿಮಾ ಎಂಬುದನ್ನು ಟ್ರೈಲರ್ ಸಾರಿ ಹೇಳಿದೆ. ಈ ಟ್ರೈಲರ್ ನಲ್ಲಿ ಬರುವಂತಹ, ಫಹಾದ್ ಫಾಸಿಲ್ ಬಣ್ಣ ಹಚ್ಚಿರುವ ನಾಯಕನ ಪಾತ್ರಕ್ಕೆ ಕೊಟ್ಟಿರುವ ಧ್ವನಿಯಿಂದ ಕನ್ನಡಿಗರಿಗೆ ಬೇಸರ ಉಂಟಾಗಿದೆ ಎಂಬ ಕಾರಣದಿಂದಾಗಿ, ಹೊಂಬಾಳೆ ಫಿಲಂಸ್ ನಾಯಕನ ಪಾತ್ರಕ್ಕೆ ಹೊಸ ದನಿಯನ್ನ ಆರಿಸಿ, ಡಬ್ಬಿಂಗ್ ನಡೆಸುತ್ತಿದ್ದಾರೆ ಅಥವಾ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ಕನ್ನಡದ ಪವನ್ ಕುಮಾರ್, ಹೊಂಬಾಳೆ ಫಿಲಂಸ್ ಜೊತೆಗೆ ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಅವರ ಸಿನಿಮಾ ‘ಧೂಮಮ್’ ಇದೇ ಜೂನ್ 23ಕ್ಕೆ ಕನ್ನಡ ಭಾಷೆಯಲ್ಲೂ ಕೂಡ ಬಿಡುಗಡೆಯಾಗಲಿದೆ.

