ಇಂದು, ಜುಲೈ 12, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಡಗರ. ತಮ್ಮ 61ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಶಿವಣ್ಣನವರಿಂದ, ಈಗಲೂ ಕೂಡ ಹಲವು ಹೊಸ ಸಿನಿಮಾಗಳು ಬರಲು ಸಿದ್ದವಾಗುತ್ತಿವೆ. ಇಂದು ಅದೆಷ್ಟೋ ಸಿನಿಮಾಗಳು ಘೋಷಣೆಯಾಗಿವೆ. ಇಂತದ್ದೇ ಒಂದು ಹೊಸ ಸಿನಿಮಾ ‘ಧೀರ’. ‘ಕಲಿಯುಗದ ಕರ್ಣ’ ಎಂಬ ಅಡಿಬರಹವಿರುವ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ. ಚಿಲ್ಲಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಾಗರ್ ಅವರಿಂದ ನಿರ್ಮಾಣಗೊಳ್ಳಲಿರುವ, ಹೆಚ್ ಸಿ ಶ್ರೀನಿವಾಸ್(ಶಿಲ್ಪಾ ಶ್ರೀನಿವಾಸ್) ಅವರು ಅರ್ಪಿಸುವ ಈ ಸಿನಿಮಾವನ್ನು ಯುವಪ್ರತಿಭೆ ನವೀನ್ ಶೆಟ್ಟಿ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಮ್ಯೂಸಿಕಲ್ ಆಕ್ಷನ್ ಡ್ರಾಮಾ ರೀತಿಯಲ್ಲಿ ಈ ಸಿನಿಮಾ ಮೂಡಿಬರಲಿದೆ. ಇದೊಂದು ಮಾಸ್ ಆಕ್ಷನ್ ಸಿನಿಮಾ ಆಗಿರಲಿದ್ದು, ಅಂಡರ್ ವರ್ಡ್ ಕಥೆ ಕೂಡ ತೆರೆಮೇಲೆ ಬರಲಿದೆ. ಶಿವರಾಜ್ ಕುಮಾರ್ ಅವರು ತೆರೆಯ ಮೇಲೆ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂ ಎನ್ ಕೃಪಾಕರ್ ಅವರು ‘ಧೀರ’ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಈಗಾಗಲೇ ಓಟಿಟಿಗೆಂದೇ ತಯಾರಾದ ‘ನಿಧಾನವಾಗಿ ಚಲಿಸಿ’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ನವೀನ್ ಶೆಟ್ಟಿ ಅವರು ಈ ಚಿತ್ರದ ಕಥೆ ಚಿತ್ರಕತೆ ಹಾಗು ನಿರ್ದೇಶನದ ಜವಾಬ್ದಾರಿಯನ್ನ ಹೊತ್ತಿದ್ದಾರೆ.
ಮೂಲತಃ ನಟನಾಗಬೇಕು ಎಂಬ ಕನಸು ಹೊತ್ತು ಮಲೆನಾಡಿನಿಂದ ಬೆಂಗಳೂರಿಗೆ ಸುಮಾರು 12 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ನವೀನ್ ಶೆಟ್ಟಿ ಅವರು ಇದೀಗ ಶಿವಣ್ಣನಿಗೆಂದೇ ತಯಾರು ಮಾಡಿಕೊಂಡಿರುವ ಈ ‘ಧೀರ’ ಕಥೆಯನ್ನ ನಿರ್ದೇಶನ ಮಾಡಲಿದ್ದಾರೆ. ಹೆಸರಾಂತ ನಿರ್ದೇಶಕರಾದ ಎಸ್ ನಾರಾಯಣ್, ಓಂ ಪ್ರಕಾಶ್ ರಾವ್, ಗಡ್ಡವಿಜಿ ಮುಂತಾದವರ ಜೊತೆಗೆ ಕೆಲಸ ಮಾಡಿದ ಅನುಭವ ಪಡೆಯುತ್ತಾ, ನಟನೆಗಿಂತ ಹೆಚ್ಚು ನಿರ್ದೇಶನದ ಕಡೆಗೆ ವಾಲಿದ ನವೀನ್, ‘ನಿಧಾನವಾಗಿ ಚಲಿಸಿ’ ಎಂಬ ಓಟಿಟಿ ಪರದೆಗಾಗಿ ಮಾಡಿದಂತಹ ಸಿನಿಮಾಗೆ ಈಗಾಗಲೇ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾವನ್ನ ಶಿವಣ್ಣ ನೋಡಿ ಮೆಚ್ಚಿಕೊಂಡಿದ್ದರು. ಅದೇ ಸಮಯದಲ್ಲಿ ಶಿವರಾಜ್ ಕುಮಾರ್ ಅವರಿಗೆ ತಾನು ಮಾಡಿಕೊಂಡಿದ್ದ ಕಥೆಯನ್ನ ಹೇಳಿದ್ದ ನವೀನ್, ಶಿವಣ್ಣ ಸಮ್ಮತಿ ಸೂಚಿಸಿದ ಮೇಲೆ ಚಿತ್ರದ ಪ್ರಿ ಪ್ರೊಡಕ್ಷನ್ ಕಡೆಗೆ ಕೆಲಸ ಆರಂಭಿಸಿದ್ದಾರೆ. ಸದ್ಯದಲ್ಲೇ ಸಿನಿಮಾದ ನಾಯಕಿ ಹಾಗು ಇತರ ತಾರಾಗಣದ ಬಗೆಗಿನ ಮಾಹಿತಿ ಹೊರಬೀಳಲಿದೆ

