ವರನಟ ಡಾ| ರಾಜಕುಮಾರ್ ಅವರ ಮೊಮ್ಮಕ್ಕಳು, ಧೀಮಂತ ನಟ ರಾಮಕುಮಾರ್ ಅವರ ಮಗ ಧೀರನ್ ರಾಮಕುಮಾರ್ ಹಾಗು ಮಗಳು ಧನ್ಯ ರಾಮಕುಮಾರ್ ಇಬ್ಬರೂ ಕೂಡ ಚಂದನವನಕ್ಕೆ ಬಾರೀ ಸದ್ದಿನ ಜೊತೆಗೇ ಕಾಲಿಟ್ಟಿದ್ದಾರೆ. ಧೀರನ್, ‘ಶಿವ 143’ ಸಿನಿಮಾದ ಮೂಲಕ ಒಂದೊಳ್ಳೆ ಯಶಸ್ಸಿನ ಜೊತೆಗೇ ಬಂದರೆ, ಇನ್ನು ಧನ್ಯ ರಾಮಕುಮಾರ್ ಅವರು ಬ್ಲಾಕ್ ಬಸ್ಟರ್ ‘ನಿನ್ನ ಸನಿಹಕೆ’ ಸಿನಿಮಾದ ಮೂಲಕ ಕನ್ನಡದ ಯುವ ನಾಯಕಿಯಾಗಿ ಯಶಸ್ಸು ಕಂಡಿದ್ದಾರೆ. ಸದ್ಯ ಇದೀಗ ಧನ್ಯ ರಾಮಕುಮಾರ್ ಅವರ ಹೊಸ ಸಿನಿಮಾದ ಅಧಿಕೃತ ಘೋಷಣೆಯಾಗಿದೆ. ಅದುವೇ ‘ಎಲ್ಲಾ ನಿನಗಾಗಿ’.
ಈ ‘ಎಲ್ಲಾ ನಿನಗಾಗಿ’ ಸಿನಿಮಾವನ್ನು ‘F3 ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಸತೀಶ್ ನೀನಾಸಂ ಹಾಗು ರಚಿತಾ ರಾಮ್ ಮತ್ತೊಮ್ಮೆ ಜೋಡಿಯಾಗಿ ತೆರೆಮೇಲೆ ಬರುತ್ತಿರುವ ಸಿನಿಮಾ ‘ಮ್ಯಾಟ್ನಿ’. ಚಿತ್ರದ ಬಹುಪಾಲು ಚಿತ್ರೀಕರಣ ಮುಗಿದಿದ್ದು, ಬಿಡುಗಡೆಯ ತಯಾರಿಗಳು ಕೂಡ ನಡೆಯುತ್ತಿವೆ. ಅದರ ನಿರ್ಮಾಪಕರೇ ಈ ‘F3 ಪ್ರೊಡಕ್ಷನ್ಸ್’. ಈಗಾಗಲೇ ‘ಮ್ಯಾಟ್ನಿ’ ಎಂಬ ಬಹುನಿರೀಕ್ಷಿತ ಸಿನಿಮಾದ ಸಿದ್ಧತೆಯಲ್ಲಿರುವ ‘F3 ಪ್ರೊಡಕ್ಷನ್ಸ್’ ಈ ಹೊಸ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಚಿತ್ರಕ್ಕೆ ಆರ್ಕಟ್ ಅವರು ನಾಯಕರಾದರೆ ಧನ್ಯ ರಾಮಕುಮಾರ್ ಅವರು ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಕಾಶಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ವಿದ್ಯಾ ಶ್ರೀಮುರಳಿ ಅವರು ಪ್ರೆಸೆಂಟ್ ಮಾಡುತ್ತಿರುವ ಈ ‘ಎಲ್ಲಾ ನಿನಗಾಗಿ’ ಚಿತ್ರದ ಸ್ಕ್ರಿಪ್ಟ್ ಪೂಜೆ ಹಾಗು ಶೀರ್ಷಿಕೆಯ ಘೋಷಣೆ ಇತ್ತೀಚೆಗಷ್ಟೇ ಮಹಾಲಕ್ಷ್ಮಿ ಲೇಔಟ್ ನ ಪಂಚಮುಖಿ ದೇವಸ್ಥಾನದಲ್ಲಿ ಜರುಗಿತು. ಈ ಗಳಿಗೆಯ ಮುಖ್ಯ ಅತಿಥಿಯಾಗಿ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದರು. ಈ ವೇಳೆ ಚಿತ್ರತಂಡದ ನಾಯಕ ನಾಯಕಿ, ನಿರ್ದೇಶಕ ನಿರ್ಮಾಪಕರು ಸೇರಿ ಪ್ರಮುಖ ಸದಸ್ಯರು ಹಾಜರಿದ್ದರು. ಮೇ ತಿಂಗಳ ಎರಡನೇ ವಾರದಲ್ಲಿ ‘ಎಲ್ಲಾ ನಿನಗಾಗಿ’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗುತ್ತಿದೆ.

