HomeNewsಉತ್ತರ ಕರ್ನಾಟಕದ ಪರಂಪರೆಯ ಹೊತ್ತು ಆರಂಭವಾಗಿದೆ 'ದೇಸಾಯಿ'!

ಉತ್ತರ ಕರ್ನಾಟಕದ ಪರಂಪರೆಯ ಹೊತ್ತು ಆರಂಭವಾಗಿದೆ ‘ದೇಸಾಯಿ’!

ಉತ್ತರ ಕರ್ನಾಟಕ ಭಾಗದ ‘ದೇಸಾಯಿ’ ಮನೆತನಕ್ಕೆ ಅದರದ್ದೇ ಆದ ಪರಂಪರೆ, ವೈಭವಗಳಿವೆ. ಮೊದಲಿಂದಲೂ ಪ್ರಖ್ಯಾತವಾದ ಈ ಮನೆತನದ ಕಥೆಯನ್ನ ತೆರೆಮೇಲೆ ತರಲು ಹೊರಟಿದ್ದಾರೆ ನಿರ್ಮಾಪಕರಾದ ಮಹಾಂತೇಶ್ ವಿ ಚೋಳಗುಡ್ಡ. ‘ದೇಸಾಯಿ’ ಎಂಬ ಹೆಸರಿನಲ್ಲೇ ಮೂಡಿಬರಲಿರೋ ಈ ಸಿನಿಮಾದ ಮುಹೂರ್ತ ಇತ್ತೀಚೆಗೆ ಬಾಗಲಕೋಟೆಯ ಮುಚಕಂಡಿಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆಯಿತು. ‘ಲವ್ 360’ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟ ಪ್ರವೀಣ್ ಕುಮಾರ್ ಈ ‘ದೇಸಾಯಿ’ ಚಿತ್ರದ ನಾಯಕರಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮದಿನದಂದು ಚಿತ್ರ ಆರಂಭವಾಯಿತು.

ನೆರೆದಿದ್ದ ಗಣ್ಯರೂ ಹಾಗು ಚಿತ್ರತಂಡದ ಸದಸ್ಯರು ಮೊದಲಿಗೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಾಸಕರಾದ ಶ್ರೀ ವೀರಣ್ಣ ಚರಂತಿಮಠ ಅವರು ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು, ವನಶ್ರೀ ಮಠ ವಿಜಯಪುರದ ಡಾ| ಜಯಬಸವಕುಮಾರ ಮಹಾಸ್ವಾಮಿಗಳು ಕ್ಯಾಮೆರಾ ಚಾಲನೆ ನೀಡಿದರು. ಸ್ವಾಮೀಜಿಗಳು ಚಿತ್ರಕ್ಕೆ ಹಾಗು ಚಿತ್ರತಂಡಕ್ಕೆ ಶುಭಕೋರಿದರು.

ನಿರ್ಮಾಪಕರಾದ ಮಹಾಂತೇಶ್ ವಿ ಚೋಳಗುಡ್ಡ ಅವರು ಮಾತನಾಡಿ, “ನಾನು ಸಿನಿಮಾಗಾಗಿ ವಿಶೇಷ ಕಥೆಯೊಂದನ್ನು ಹುಡುಕುತ್ತಿದ್ದಾಗ ನನ್ನ ತಲೆಗೆ ಬಂದದ್ದು ಈ ಮೊದಲಿನಿಂದಲೂ ತನ್ನದೇ ಆದ ಶ್ರೀಮಂತ ಪರಂಪರೆ ಹೊಂದಿರುವ ‘ದೇಸಾಯಿ’ ಮನೆತನ. ಅದರ ಬಗ್ಗೆಯೇ ಸಿನಿಮಾ ಮಾಡಬಹುದು ಎಂದೆನಿಸಿ ನಿರ್ಮಾಣಕ್ಕೆ ಮುಂದಾದೆ” ಎಂದರು. ಇನ್ನು ಚಿತ್ರದ ನಿರ್ದೇಶಕರಾದ ನಾಗಿರೆಡ್ಡಿ ಬಡ ಅವರು, “ಇದು ನನ್ನ ನಿರ್ದೇಶನದ ಮೊದಲ ಸಿನಿಮಾ ಆದ್ದರಿಂದ ಅದ್ದೂರಿಯಾಗಿ ತೆರೆಮೇಲೆ ಬರುವ ಹಾಗೆ ಸಿದ್ಧಮಾಡಿಕೊಂಡಿದ್ದೇನೆ” ಎಂದರು.

ಕಥಾನಾಯಕ ಪ್ರವೀಣ್ ಕುಮಾರ್ ಅವರು ಸಿನಿಮಾದ ಬಗೆಗೆ ಹೇಳುತ್ತಾ, “ಚಿತ್ರದ ಕತೆ ನನಗೆ ತುಂಬಾ ಇಷ್ಟವಾಯಿತು. ಈ ಪಾತ್ರ ತುಂಬಾ ಚಾಲೆಂಜಿಂಗ್ ಆಗಿದ್ದು, ನನ್ನ ವೃತ್ತಿಜೀವನದಲ್ಲಿ ‘ದೇಸಾಯಿ’ ಸಿನಿಮಾ ಒಂದು ಹೊಸ ಅಧ್ಯಾಯ ಆಗಲಿದೆ ಎಂಬ ನಂಬಿಕೆಯಿದೆ” ಎಂದರು. ಚಿತ್ರದ ನಾಯಕಿಯಾಗಿ ಮೈಸೂರು ಮೂಲದ ರಾಧ್ಯ ನಟಿಸಲಿದ್ದು ಇವರ ಜೊತೆಗೇ ಚಿತ್ಕಲಾ ಬಿರಾದಾರ್, ಮಧುಸೂಧನ್ ರಾವ್, ಹರಿಣಿ, ವೀರೇಂದ್ರ ಮುಂತಾದವರು ಬಣ್ಣ ಹಚ್ಚಲಿದ್ದಾರೆ. ಇನ್ನು ಛಾಯಾಗ್ರಾಹಕರಾಗಿ ಜೈ ಆನಂದ್, ಸಂಗೀತ ನಿರ್ದೇಶಕರಾಗಿ ಸಾಯಿ ಕಾರ್ತಿಕ್, ಸಂಕಲನಕಾರರಾಗಿ ದೀಪು ಎಸ್ ಕುಮಾರ್ ಕೆಲಸ ನಿರ್ವಹಿಸಲಿದ್ದು, ಯಲ್ಲಪ್ಪ ವಿ ಚೋಳಗುಡ್ಡ ಸಹ ನಿರ್ಮಾಪಕರಾಗಿರುವ ಈ ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕ ಭಾಗದಲ್ಲೇ ನಡೆಯಲಿದೆ.

RELATED ARTICLES

Most Popular

Share via
Copy link
Powered by Social Snap