ಒಬ್ಬ ಲೇಖಕನ ಅಭಿಮಾನಿಗಳೇ ನಿರ್ಮಿಸಿದ ಕನ್ನಡದ ಮೊದಲ ಚಿತ್ರ ‘ಡೇರ್ ಡೆವಿಲ್ ಮುಸ್ತಾಫಾ’!
ಸಿನಿಮಾರಂಗದಲ್ಲಿ ಅಂದಿನಿಂದ ಇಂದಿನವರೆಗೂ ಹಲವು ಕಾದಂಬರಿ ಆಧಾರಿತ ಚಿತ್ರಗಳು, ತೆರೆಯ ಮೇಲೆ ಬಂದು ಜನರ ಮನ ಗೆದ್ದು, ಬ್ಲಾಕ್ಲ್ ಬಸ್ಟರ್ ಆದ ಅದೆಷ್ಟೋ ಉದಾಹರಣೆಗಳಿವೆ. ನಮ್ಮ ಕನ್ನಡ ಚಿತ್ರರಂಗ ಕೂಡ ಇದಕ್ಕೆ ಹೊರತಾಗಿಲ್ಲ. ನಮ್ಮ ಸ್ಯಾಂಡಲ್ವುಡ್ ನಲ್ಲೂ ಕೂಡ ಹಲವು ಪ್ರಸಿದ್ಧ ಕಾದಂಬರಿಗಳನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾಗಳು ಬಂದಿವೆ, ಬಂದವು ಹಿಟ್ ಕೂಡ ಆಗಿವೆ. ಸದ್ಯ ಒಂದು ಸಂಕಲನದ ಸಣ್ಣ ಕಥೆಯನ್ನ ಆಧರಿಸಿ ಸಿನಿಮಾವೊಂದು ಬರುತ್ತಿದೆ. ಅದುವೇ ‘ಡೇರ್ ಡೆವಿಲ್ ಮುಸ್ತಾಫಾ’. ಕನ್ನಡದ ಪ್ರಖ್ಯಾತ ಸಾಹಿತಿ, ಅಪಾರ ಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು ಬರೆದಂತಹ ಸಣ್ಣ ಕಥೆಯೊಂದನ್ನ ಆಧರಿಸಿ ಶಶಾಂಕ್ ಸೋಘಲ್ ಅವರು ಈ ಸಿನಿಮಾ ಮಾಡಿದ್ದು, ಸುಮಾರು ಒಂದು ವರ್ಷದಿಂದಲೇ ಸಾಲಿನಲ್ಲಿದ್ದಂತಹ ಈ ಚಿತ್ರ ಇದೀಗ ಬಿಡುಗಡೆಯ ಘೋಷಣೆ ಮಾಡಿದೆ. ಅಷ್ಟೇ ಅಲ್ಲದೇ ಚಿತ್ರದ ಟ್ರೈಲರ್ ಹೊರಬೀಳುವ ದಿನಾಂಕವನ್ನು ಕೂಡ ಚಿತ್ರತಂಡ ಹೊರಬಿಟ್ಟಿದೆ.
ಪೂರ್ಣಚಂದ್ರ ತೇಜಸ್ವಿ ಅವರ ಪ್ರಖ್ಯಾತ ‘ಅಬಚೂರಿನ ಪೋಸ್ಟ್ ಆಫೀಸು ಮತ್ತು ಇತರ ಕಥೆಗಳು’ ಎಂಬ ಪುಸ್ತಕದಲ್ಲಿ ಬರುವಂತಹ ಒಂದು ಸಣ್ಣ ಕಥೆ ಈ ‘ಡೇರ್ ಡೆವಿಲ್ ಮುಸ್ತಾಫಾ’. ಈ ಸಣ್ಣ ಕಥೆಯನ್ನೇ ಸ್ಕ್ರಿಪ್ಟ್ ಮಾಡಿಕೊಂಡು ರಚಿಸಿರುವ ಈ ಚಿತ್ರ, ಒಬ್ಬ ಲೇಖಕನ ಅಭಿಮಾನಿಗಳು ತಾವೇ ನಿರ್ಮಿಸಿರುವ ಮೊದಲ ಸಿನಿಮಾ ಎಂಬ ಕೀರ್ತಿಯನ್ನು ಕೂಡ ಹೊತ್ತಿದೆ. ಹೌದು, ಈ ಸಿನಿಮಾದ ನಿರ್ಮಾತೃಗಳು ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು. ಕ್ರೌಡ್ ಫಂಡಿಂಗ್ ಮಾದರಿಯಲ್ಲಿ, ಹಲವು ಪೂಚಂತತೇ ಅವರ ಅಭಿಮಾನಿಗಳ ಮೂಲಕ ಚಿತ್ರಕ್ಕೆ ಬಂಡವಾಳ ಹೂಡಿ, ಈ ಸಿನಿಮಾವನ್ನ ಸಿದ್ದಪಡಿಸಲಾಗಿದೆ. ಚಿತ್ರದ ಪೂರ್ಣ ಹೆಸರು ‘ಡೇರ್ ಡೆವಿಲ್ ಮುಸ್ತಾಫಾ ಮತ್ತು ರಾಮನುಜ ಅಯ್ಯಂಗಾರಿ ಪಟಾಲಂ’. ಇಷ್ಟೆಲ್ಲಾ ಹೆಗ್ಗಳಿಕೆಯಿರುವ ಈ ಸಿನಿಮಾ ಇದೇ ಮೇ 19ನೇ ತಾರೀಕಿನಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೈಲರ್ ಅನ್ನು ಮೇ 4ರಂದು ಬಿಡುಗಡೆ ಮಾಡುತ್ತೇವೆ ಎಂದೂ ಚಿತ್ರತಂಡ ಮಾಹಿತಿ ಹೊರಬಿಟ್ಟಿದೆ.
ಶಶಾಂಕ್ ಸೋಘಲ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಪ್ರಮುಖ ಪಾತ್ರಧಾರಿ ‘ಜಮಾಲ್ ಅಬ್ದುಲ್ಲಾ ಮುಸ್ತಫಾ ಹುಸೈನ್’ಯಾಗಿ ಶಿಶಿರ್ ಬೈಕಾಡಿ ಅವರು ಬಣ್ಣ ಹಚ್ಚಿದ್ದು, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಆದಿತ್ಯ ಅಶ್ರೀ, ಸುಪ್ರೀತ್ ಭಾರದ್ವಜ್, ಪ್ರೇರಣಾ, ಹರಿಣಿ, ಆಶಿತ್, ಅಭಯ್ ಮುಂತಾದ ಯುವನಟರು ನಟಿಸಿದ್ದಾರೆ. ಜೊತೆಗೇ ಮಂಡ್ಯ ರಮೇಶ್, ಪೂರ್ಣ ಮೈಸೂರು, ಹಿರಿಯ ನಟ ಎಂ ಎಸ್ ಉಮೇಶ್ ಸೇರಿದಂತೆ ಹಲವು ಪ್ರಖ್ಯಾತ ನಟರು ಕೂಡ ಸಿನಿಮಾದಲ್ಲಿರಲಿದ್ದಾರೆ. ನವನೀತ್ ಶ್ಯಾಮ್ ಅವರ ಸಂಗೀತ, ರಾಹುಲ್ ರಾಯ್ ಅವರ ಛಾಯಾಗ್ರಾಹಣ ಚಿತ್ರದಲ್ಲಿರಲಿದೆ.
‘ಸಿನಿಮಾಮರ’ ಎಂಬ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ನಟರಾಕ್ಷಸ ದಾಳಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ಕೂಡ ಸಾಥ್ ನೀಡುತ್ತಿದ್ದು, ‘ಕೆ ಆರ್ ಜಿ ಸ್ಟುಡಿಯೋಸ್’ ವಿತರಣೆ ಮಾಡಲಿದೆ. ಆರಂಭದಿಂದಲೂ ತಮ್ಮ ವಿಭಿನ್ನ ಪ್ರೊಮೊಗಳು, ಅಣ್ಣಾವ್ರನ್ನ ಗ್ರಾಫಿಕ್ಸ್ ಮೂಲಕ ತೆರೆಮೇಲೆ ತಂದಂತಹ ‘ನಿನ್ನಂತೋರ್ ಯಾರು ಇಲ್ವಲ್ಲೋ’ ಎಂಬ ಹಾಡು ಅಲ್ಲದೇ ಈಗೀಗ ಹೊರಬರುತ್ತಿರುವ ಸಿನಿಮಾದ ಎಲ್ಲಾ ಹೊಸ ಹಾಡುಗಳು ಕೂಡ ಕುತೂಹಲ ಹುಟ್ಟಿಸಿದ್ದು, ಸಿನಿಪ್ರೇಮಿಗಳಿಗೆ ಒಂದಷ್ಟರ ಮಟ್ಟಿಗಿನ ನಿರೀಕ್ಷೆ ಕೂಡ ಹುಟ್ಟಿಸಿವೆ. ಈ ‘ಡೇರ್ ಡೆವಿಲ್ ಮುಸ್ತಫಾ ಮತ್ತು ರಾಮಾನುಜ ಅಯ್ಯಂಗಾರಿ ಪಟಾಲಂ’ ಹಳೆಯ ಕಾಲಘಟ್ಟದಲ್ಲಿ ನಡೆವಂತಹ ಕಥೆಯಾಗಿದ್ದು, ಜಾತಿ ಧರ್ಮದ ಭೇದಭಾವಗಳ ಬಗ್ಗೆ ಸೂಕ್ಷ್ಮವಾಗಿ ಬೆಳಕು ಚೆಲ್ಲುತ್ತಾ, ಅಷ್ಟೇ ಸುಂದರವಾಗಿ ಅದರ ಬಗ್ಗೆ ಮಾತನಾಡುತ್ತಾ ಹೋಗುವಂತಹ ಸಿನಿಮಾ. ಇದೇ ಮೇ 19ರಂದು ಸಿನಿಮಾ ಬೆಳ್ಳಿತೆರೆಗಳ ಮೇಲೆ ಬರುತ್ತಿದ್ದು, ಚಿತ್ರದ ಟ್ರೈಲರ್ ಮೇ 4ರಂದು ಬಿಡುಗಡೆಯಾಗಲಿದೆ.

