ಮನಸ್ಸಿಗೆ ಮುದ ನೀಡುವಂತಹ ಅದೆಷ್ಟೋ ಮೆಲೋಡಿ ಹಾಡುಗಳನ್ನ ಕನ್ನಡಿಗರಿಗೆ ನೀಡಿರುವಂತಹ ಹೆಸರಾಂತ ಸಂಗೀತ ನಿರ್ದೇಶಕರಾದ ವಿ ಮನೋಹರ್ ಅವರು ಇದೀಗ ಮರಳಿ ನಿರ್ದೇಶನದತ್ತ ಬರುತ್ತಿದ್ದಾರೆ. ಸುಮಾರು 23 ವರ್ಷಗಳ ನಂತರ ನಿರ್ದೇಶನ ಮಾಡುತ್ತಿರುವ ಇವರ ಮುಂದಿನ ಸಿನಿಮಾ ‘ದರ್ಬಾರ್’. ಹಳ್ಳಿ ರಾಜಕೀಯದ ಸೂಕ್ಷ್ಮತೆ ಸಾರುವ ಈ ಸಿನಿಮಾಗೆ ಸತೀಶ್ ಅವರು ಕಥೆ ಬರೆದು, ನಿರ್ಮಾಣ ಮಾಡಿ ಜೊತೆಗೆ ನಾಯಕನಾಗಿ ನಟನೆಯನ್ನು ಮಾಡುತ್ತಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಇದರ ಮೇಕಿಂಗ್ ವಿಡಿಯೋ ಪ್ರದರ್ಶನ ಹಾಗು ಸುದ್ದಿಗೋಷ್ಠಿ ಎಸ್ ಆರ್ ವಿ ಚಿತ್ರಮಂದಿರದಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ವಿ ಮನೋಹರ್ ಅವರು, “ನಾನು ‘ಇಂದ್ರಧನುಷ್’ ಸಿನಿಮಾ ಮಾಡಿದ ಮೇಲೆ ಏನೆಲ್ಲಾ ಆಗಿ ಹೋಯಿತು. ಈಗ ಸದ್ಯ ಸುಮಾರು 23 ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದೇನೆ ಎಂದರೆ ಅದಕ್ಕೆ ಸತೀಶ್ ಅವರೇ ಕಾರಣ. ನಾನೂ ಸೀರಿಯಲ್, ಮ್ಯೂಸಿಕ್ ಎಂದು ಬ್ಯುಸಿಯಾಗಿ ಹೋದೆ. ಸಿನಿಮಾ ನಿರ್ದೇಶನ ಮುಂದುವರೆಯಲೇ ಇಲ್ಲ. ನನಗೆ ರಾಜಕೀಯದ ಬಗ್ಗೆ ಚಿತ್ರ ಮಾಡಬೇಕು ಎಂದು ತುಂಬಾ ಆಸೆಯಿತ್ತು. ಅದೇ ಸಮಯದಲ್ಲಿ ಸಿಕ್ಕ ಸತೀಶ್ ಅವರು ಈ ಕಥೆ ಹೇಳಿದರು. ರಾಜಕೀಯದ ಏರುಪೇರುಗಳನ್ನು ವ್ಯಂಗ್ಯವಾಗಿ ಈ ಚಿತ್ರದಲ್ಲಿ ತೋರಿಸಲಾಗುತ್ತದೆ. ಅದಕ್ಕೇ ನಾನೂ ಖುಷಿಯಿಂದ ಒಪ್ಪಿಕೊಂಡು ನಿರ್ದೇಶನ ಆರಂಭಿಸಿದೆ ” ಎನ್ನುತ್ತಾರೆ.
“ಸಿನಿಮಾ ಆರಂಭಿಸಿದ ಸಂಧರ್ಭದಲ್ಲೇ ಕೋವಿಡ್ ಆರಂಭವಾಯಿತು. ಲಾಕ್ ಡೌನ್ ನಲ್ಲಿ ನಿಂತು, ಎರಡನೇ ಅಲೆಯ ನಂತರ ಚಿತ್ರೀಕರಣ ಮುಗಿಸಿದೆವು. ಮದ್ದೂರು ಸಮೀಪದ ಹಳ್ಳಿಯೊಂದರಲ್ಲಿ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ. ಅಲ್ಲಿನ ಜನರು ಕೂಡ ನಮಗೆ ತುಂಬಾ ಸಹಕಾರಿಯಾಗಿದ್ದರು. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಟೈಟಲ್ ಸಾಂಗ್ ಅನ್ನು ಚಂದನ್ ಶೆಟ್ಟು, ರಾಜಕೀಯದ ಬಗೆಗಿನ ಹಾಡನ್ನ ಉಪೇಂದ್ರ ಅವರು ಹಾಡಿದ್ದರೆ, ಡುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಸಾಧು ಕೋಕಿಲ, ಅಶೋಕ್, ನವೀನ್ ಡಿ ಪಡೀಲ್, ಎಂ ಎನ್ ಲಕ್ಷ್ಮೀದೇವಿ, ಮುಂತಾದ ನಟರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸಿನಿಮಾ ಡಿಟಿಎಸ್ ಹಂತದಲ್ಲಿದ್ದು, ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯ ಯೋಚನೆಯಿದೆ” ಎಂದಿದ್ದಾರೆ ವಿ ಮನೋಹರ್ ಅವರು.
ಇನ್ನು ಚಿತ್ರದ ನಾಯಕಿ ಜಾಹ್ನವಿ ಮಾತನಾಡಿ, “ಇದು ನನ್ನ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲೇ ಇಷ್ಟು ದೊಡ್ಡ ನಿರ್ದೇಶಕರ ಜೊತೆ ಕೆಲಸ ಮಾಡಲು ಸಿಕ್ಕಿದ್ದು ನನ್ನ ಪುಣ್ಯವೇ ಸರಿ. ಮಧ್ಯಮವರ್ಗದ ಸೈಕಲಾಜಿ ವಿದ್ಯಾರ್ಥಿನಿ, ರಜೆಗೆಂದು ಊರಿಗೆ ಬಂದಾಗ ಅಲ್ಲಿ ನಾಯಕನ ಪರಿಚಯವಾಗಿ, ನಂತರ ಅವನ ಸಹಾಯಕ್ಕೆ ನಿಲ್ಲುವಂತಹ ಪಾತ್ರ” ಎಂದರು. ಇನ್ನು ಚಿತ್ರದ ಕಥೆ ಬರೆದು, ನಿರ್ಮಿಸಿ, ನಟನೆಯನ್ನೂ ಮಾಡಿರುವ ಸತೀಶ್ ಅವರು ಮಾತನಾಡಿ, “ಮನೋಹರ್ ಅವರೊಂದಿಗೆ ಕೆಲಸ ಮಾಡಿದ್ದು ಬಹಳ ಸಂತಸ. ನಾನು ಹೇಳಿದ್ದನ್ನು ಅವರು ಬರೆಯುತ್ತಿದ್ದಿದ್ದು ನನಗೆ ಮುಜುಗರ ತರಿಸುತ್ತಿತ್ತು. ನಮ್ಮ ಚಿತ್ರದಲ್ಲಿ ಮತದಾನದ ಬಗ್ಗೆ, ರಾಜಕೀಯದ ಬಗ್ಗೆ ಆಲೋಚನೆ ಮಾಡುವಂತಹ ಕಥೆ ಇಟ್ಟಿದ್ದೇವೆ. ಇನ್ನೇನು ಎರಡು ಮೂರು ದಿನಗಳಲ್ಲಿ ಸೆನ್ಸಾರ್ ಗೆ ಕಳಿಸಲಿದ್ದೇವೆ. ಪ್ರತೀ ಪಾತ್ರಕ್ಕೂ ಅವರೇ ಕೂತು ಆರಿಸಿದ್ದರು, ಅಂತೆಯೇ ನನ್ನ ಪಾತ್ರಕ್ಕೂ ನೀವೇ ಮಾಡಿ ಎಂದು ಒತ್ತಾಯಿಸಿದ್ದಕ್ಕೆ ನಾನೂ ನಟನೆಗೆ ಇಳಿದೆ” ಎಂದರು.
ಹಲವು ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ವಿ ಮನೋಹರ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಮೂರನೇ ಸಿನಿಮಾ ಈ ‘ದರ್ಬಾರ್’. ಹಳ್ಳಿಯೊಂದರ ರಾಜಕೀಯದ ಸೂಕ್ಷ್ಮ ವಿಚಾರಗಳನ್ನ ಈ ಚಿತ್ರದಲ್ಲಿ ಹೇಳಲಾಗಿದೆ. ‘ದರ್ಬಾರ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಬಿ ಎನ್ ಶಿಲ್ಪಾ ಅವರು ನಿರ್ಮಾಣ ಮಾಡಿದ್ದು, ನಾಯಕ ಸತೀಶ್ ಚಿತ್ರದ ಕಥೆ, ಚಿತ್ರಕತೆ ಹಾಗು ಸಂಭಾಷಣೆ ಬರೆದಿದ್ದಾರೆ. ವಿ ಮನೋಹರ್ ಅವರದ್ದೇ ಸಂಗೀತ ಚಿತ್ರದಲ್ಲಿರಲಿದ್ದು, ಸಾಮ್ರಾಟ್ ಎಸ್ ಅವರ ಛಾಯಾಗ್ರಾಹಣ ಇರಲಿದೆ. ಮಂಡ್ಯ, ಮದ್ದೂರು ಹಾಗು ಕೋಲಾರ ಸಮೀಪದ ಮಾಲೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಏಪ್ರಿಲ್ ನಲ್ಲಿ ಸಿನಿಮಾ ತೆರೆಕಾಣಬಹುದು.



