ಹಾಡುಗಳಲ್ಲಿ ಕಲರ್ ಪುಲ್ ಕನಸುಗಳು
ಈ ಹಿಂದೆ ಪರಿಸರ ಸಂರಕ್ಷಣೆಯ ಕುರಿತಂತೆ ಜನಜಾಗೃತಿ ಮೂಡಿಸುವ ಕಾನ್ಸೆಪ್ಟ್ ಹೊಂದಿದ್ದ ಸ್ವಚ್ಛ ಕರ್ನಾಟಕ ಎಂಬ ಚಲನಚಿತ್ರವನ್ನು ನಿರ್ಮಿಸಿದ್ದ ಎಲ್. ರವಿಕಮಾರ್ ಅವರು ಇದೀಗ ಮತ್ತೊಂದು ಚಲನಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ. ಜೊತೆಗೆ ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ತಮ್ಮ ಶಾಂತಿ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ‘ಕಲರ್ ಫುಲ್ ಕನಸುಗಳು’ ಎಂಬ ಚಿತ್ರವನ್ನು ಅವರು ನಿರ್ಮಾಣ ಮಾಡುವುದರ ಜೊತೆಗೆ ತಾವೇ ಚಿತ್ರದ ನಿರ್ದೇಶನ ಸಾರಥ್ಯವನ್ನೂ ಸಹ ವಹಿಸಿಕೊಂಡಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಲನಚಿತ್ರವಾಗಲಿದ್ದು, ಇಂದಿನ ಯುವ ಜನಾಂಗದಲ್ಲಿ ಉದ್ಭವಿಸುವ ಆಸೆ, ಕನಸುಗಳನ್ನು ಆಧರಿಸಿ ಈ ಚಿತ್ರಕ್ಕೆ ರವಿಕುಮಾರ್ ಅವರೇ ಕಥೆ, ಚಿತ್ರಕಥೆಯನ್ನು ಕೂಡ ಬರೆದಿದ್ದಾರೆ.


ಅತಿ ಶೀಘ್ರದಲ್ಲೇ ಕಲರ್ ಫುಲ್ ಕನಸುಗಳು ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸುವ ಸಿದ್ದತೆಯನ್ನು ನಿರ್ಮಾಪಕರು ಮಾಡಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯವನ್ನು ನಡೆಸಲಾಗಿದೆ. ಇಂದೂ ವಿಶ್ವನಾಥ್ ಹಾಗೂ ಪುನೀಶ್ ಕುಮಾರ್ ಅವರುಗಳು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡ ಹಾಗೂ ಶ್ರೀಧರ್ ಶೆಟ್ಟಿ ಅವರುಗಳು ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ನಾಗೇಶ್ ಅವರ ಛಾಯಾಗ್ರಹಣ, ಶ್ರೀಧರ್ ಶೆಟ್ಟಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಉಮೇಶ್ ಅವರ ಸಹನಿರ್ದೇಶನ ಹಾಗೂ ವೈಲೆಂಟ್ ವೇಲು ಅವರು ಚಿತ್ರಕ್ಕೆ ಸಾಹಸ ಸಂಯೋಜನೆ ಮಾಡಲಿದ್ದಾರೆ.

