ಖ್ಯಾತ ಸಾಹಿತಿ ಮಣಿ ಆರ್ ರಾವ್ ಅವರ ಕಾದಂಬರಿ ಆಧಾರಿತ ಸಿನಿಮಾ ‘ಚೌಕಾಬಾರ’ ತನ್ನ ಟ್ರೈಲರ್ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿದೆ. ‘ನವಿ ನಿರ್ಮಿತಿ’ ಬ್ಯಾನರ್ ಅಡಿಯಲ್ಲಿ ನಟಿ ನಮಿತಾ ರಾವ್ ಅವರು ನಿರ್ಮಿಸಿರುವ, ವಿಕ್ರಮ್ ಸೂರಿ ಅವರ ನಿರ್ದೇಶನದ, ಈ ಸಿನಿಮಾ ಇದೇ ಮಾರ್ಚ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ದೊಡ್ಡಮಟ್ಟದಲ್ಲೇ ನಡೆದ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದು, ಅವರೆಲ್ಲರೂ ಸಿನಿಮಾಗೆ ಶುಭ ಹಾರೈಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.


ಈ ಸಂಧರ್ಭದಲ್ಲಿ ಮಾತನಾಡಿದ ಖ್ಯಾತ ಹಿರಿಯ ಸಾಹಿತಿ ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರು, “ವಿಕ್ರಮ್ ಸೂರಿ ಅವರು ನನಗೆ ‘ಚಿನ್ನಾರಿಮುತ್ತ’ ಕಾಲದಿಂದಲೂ ಪರಿಚಯ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ವಿಕ್ರಮ್-ನಮಿತಾ ದಂಪತಿಯ ಈ ಸಿನಿಮಾಗೆ ನಾನು ಕೂಡ ಹಾಡೊಂದನ್ನು ಬರೆದಿದ್ದೇನೆ. ಚಿತ್ರದ ಹಾಡುಗಳು ಹಾಗಿ ಟ್ರೈಲರ್ ಅದ್ಭುತವಾಗಿವೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ” ಎಂದಿದ್ದಾರೆ. ಇನ್ನು ಉಪಸ್ಥಿತರಿದ್ದ ಮತ್ತೊಬ್ಬ ಹಿರಿಯ ಸಾಹಿತಿಯಾದ ಬಿ ಆರ್ ಲಕ್ಷ್ಮಣ್ ರಾವ್ ಅವರು, “ನಾನು ಹಾಗು ಹೆಚ್ ಎಸ್ ವಿ ಇಬ್ಬರೂ ಈ ಚಿತ್ರದ ಹಾಡಿಗೆ ಸಾಹಿತ್ಯ ನೀಡಿರುವುದು ಸಂತಸದ ವಿಚಾರ. ನಮ್ಮ ಸಾಲುಗಳಿಗೆ ಅಶ್ವಿನ್ ಕುಮಾರ್ ಅವರು ಉತ್ತಮ ಸಂಗೀತ ನೀಡಿದ್ದಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದರು.
ಇವರುಗಳ ಜೊತೆಗೆ ನಟ ಸುಂದರ್ ರಾಜ್ ಅವರು, ಲಹರಿ ವೇಲು, ರಘು ಭಟ್, ಸಚಿವರಾದ ಆರ್ ಅಶೋಕ್ ಅವರ ಪುತ್ರ ಶರತ್, ನಿರ್ಮಾಪಕ ಸಂಜಯ್ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ ಮಾ ಹರೀಶ್, ಉದ್ಯಮಿ ಉಮೇಶ್ ಕುಮಾರ್, ಸಂಜಯ್ ಸೂರಿ ಸೇರಿದಂತೆ ಹಲವು ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ಎಲ್ಲರೂ ಸಹ ‘ಚೌಕಾಬಾರ’ ಚಿತ್ರದ ಕುರಿತಾಗಿ ಶುಭಹಾರೈಸಿದರು. ಕಲಾವಿದರಾದ ವಿಹಾನ್ ಪ್ರಭಂಜನ್ ಹಾಗು ನಟಿ ಕಾವ್ಯ ರಮೇಶ್ ಅವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
“ಆರಂಭದಿಂದಲೂ ನಮ್ಮ ಸಿನಿಮಾ ತಂಡಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೀರಿ. ಮುಂದೆಯೂ ಕೂಡ ಇದೇ ರೀತಿಯಲ್ಲಿ ಪ್ರೋತ್ಸಾಹಿಸಿ ಚಿತ್ರದ ಯಶಸ್ಸಿಗೆ ಕಾರಣರಾಗಬೇಕಾಗಿ ಎಲ್ಲರಲ್ಲೂ ಕೇಳಿಕೊಳ್ಳುತ್ತೇವೆ” ಎಂದರು ವಿಕ್ರಮ್ ಸೂರಿ ಹಾಗು ನಮಿತಾ ರಾವ್ ದಂಪತಿ. ಇದೇ ಮಾರ್ಚ್ 10ಕ್ಕೆ ಸಿನಿಮಾ ಬಿಡುಗಡೆಯಗುತ್ತಿದ್ದು, ಚಿತ್ರದ ಬಗೆಗೆ ವಿಶೇಷ ನಿರೀಕ್ಷೆಯಿದೆ.



