ಶಶಿಕುಮಾರ್ ಎಂಬ ಹೆಸರು ಯಾರಿಗೇ ತಾನೇ ತಿಳಿದಿಲ್ಲ. ಕನ್ನಡ ಸಿನಿಮಾ ರಸಿಕರೆಲ್ಲರಿಗೂ ಚಿರಪರಿಚಿತವಾಗಿರುವವರು ಇವರು. ದಶಕಗಳ ಹಿಂದೆ ಸ್ಯಾಂಡಲ್ವುಡ್ ನಲ್ಲಿ ಎಲ್ಲೆಡೆ ಗುಲ್ಲೆಬ್ಬಿಸಿದ್ದ ನಾಯಕ ನಟರ ಸಾಲಿನ ಮುಂಚೂಣಿ ಇವರು. ಇದೀಗ ಇವರ ಪುತ್ರನಾದ ಅಕ್ಷಿತ್ ಶಶಿಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ತಮ್ಮ ಎರಡನೇ ಸಿನಿಮಾ ಬಿಡುಗಡೆಗೊಳ್ಳುತ್ತಿರುವ ಸಂತಸದಲ್ಲಿದ್ದಾರೆ. ‘ಖಯೋಸ್’ ಎಂದು ಹೆಸರಿಡಲಾಗಿರುವ ಈ ಸಿನಿಮಾದ ವಿಶೇಷತೆಯೆಂದರೆ, ಮೊದಲ ಬಾರಿಗೆ ಶಶಿಕುಮಾರ್ ಅವರು, ಅವರ ಮಗನ ಸಿನಿಮಾದಲ್ಲಿ ಮಗನಿಗೆ ಜೊತೆಯಾಗಿ ನಟಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂವನ್ನು ಕೂಡ ಘೋಷಣೆ ಮಾಡಿದೆ ಚಿತ್ರತಂಡ.
ಅಕ್ಷಿತ್ ಶಶಿಕುಮಾರ್ ಹಾಗು ಅದಿತಿ ಪ್ರಭುದೇವ ಅವರು ಜೊತೆಯಾಗಿ ನಟಿಸುತ್ತಿರುವ ಈ ಸಿನಿಮಾ ಒಂದು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಜೀವನದ ಕಥೆಯಾಗಿರಲಿದೆ. ಚಿತ್ರದಲ್ಲಿ ನಾಯಕಿ ಅದಿತಿ ಪ್ರಭುದೇವ ಹಾಗು ನಾಯಕ ಅಕ್ಷಿತ್ ಶಶಿಕುಮಾರ್ ಇಬ್ಬರದು ಕೂಡ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪಾತ್ರ. ಮೂಲತಃ ವೈದ್ಯರೇ ಆಗಿರುವಂತಹ ಡಾ| ಜಿ. ವಿ. ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿರಲಿದ್ದು, ವೈದ್ಯಕೀಯ ಪ್ರಪಂಚದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ‘ಸದ್ಯ ಸಿನಿಮಾ ಇದೇ ಫೆಬ್ರವರಿ 17ರಂದು ಬೆಳ್ಳಿತೆರೆ ಏರಲಿದೆ ಎಂದು ಸಿನಿಮಾ ತಂಡ ಘೋಷಣೆ ಮಾಡಿದ್ದಾರೆ. ‘ಖಯೋಸ್(Chaos)’ ಎಂಬ ಹೆಸರು ಏಕೆ ಎಂಬ ಪ್ರಶ್ನೆಗೆ ಕೂಡ ಸಿನಿಮಾದಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ ನಿರ್ದೇಶಕರು.
ಇತ್ತೀಚಿಗಷ್ಟೇ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಅತಿಥಿಗಳಾಗಿ ವಿನೋದ್ ಪ್ರಭಾಕರ್, ಮಂಜು ಪಾವಗಡ, ನಿರಂಜನ್ ಸುಧೀಂದ್ರ, ಶಶಿಕುಮಾರ್ ಮುಂತಾದ ಹೆಸರಾಂತ ನಟರು ಆಗಮಿಸಿದ್ದರು. ಈ ಸಂಧರ್ಭ ‘ಖಯೋಸ್’ ಸಿನಿಮಾದ ಬಗ್ಗೆ ಮಾತನಾಡಿದ ಶಶಿಕುಮಾರ್, ತಮ್ಮ ಮಗನ ಸಿನಿಮಾವನ್ನು ಹೊಗಳುತ್ತ, ‘ಯಜಮಾನ’ ಸಿನಿಮಾದ ಹಾಡೊಂದಕ್ಕೆ ಹೆಜ್ಜೆ ಹಾಕುವುದರ ಮೂಲಕ ಎಲ್ಲರನ್ನು ರಂಜಿಸಿದ್ದರು. ಇನ್ನು ಮತ್ತಿತರ ಅಥಿತಿಗಳು ‘ಹೊಸಬರು ಬರಬೇಕು, ಹೊಸ ರೀತಿಯ ಸಿನಿಮಾಗಳು ಬರಬೇಕು’ ಎಂದು ಹೇಳುತ್ತಾ ಚಿತ್ರತಂಡಕ್ಕೆ ಪ್ರೋತ್ಸಾಹ ತುಂಬಿದರು.
ಚಿತ್ರದ ನಾಯಕ ಅಕ್ಷಿತ್ ಕುಮಾರ್ ಅವರು ಮಾತನಾಡಿ, “ಇದು ನನ್ನ ಎರಡನೇ ಸಿನಿಮಾ. ಈ ಚಿತ್ರಕ್ಕೆ ನನಗೆ ದೊರೆತಂತಹ ಸಹಕಾರ ಅದ್ವಿತಿಯ. ಅಪ್ಪನ ನೆರಳಲ್ಲೆ, ಬೆಳೆದ ಮಗನೇ ಆದರೂ ಸರಿ, ತನಗಾಗಿಯೇ ಸ್ವಂತ ಜೀವನ ಕಟ್ಟಿಕೊಳ್ಳಲು ಪ್ರತ್ಯೇಕ ಮರವೊಂದು ಅತ್ಯಗತ್ಯ. ಅಂತೆಯೇ ಈ ಚಿತ್ರರಂಗ ಕೂಡ. ನನ್ನ ಸ್ನೇಹಿತರು, ಪರಿಚಿತರು ಅತ್ಯಂತ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾನು ಚಿರಋಣಿ. ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನ ತಿಳಿಸಿ” ಎಂದಿದ್ದಾರೆ.
ಪಾರುಲ್ ಆಗರ್ವಾಲ್ ಹಾಗು ಹೇಮಚಂದ್ರ ರೆಡ್ಡಿ ಅವರು ಈ ಚಿತ್ರದ ನಿರ್ಮಾಣ ಮಾಡಿದ್ದು, ವಿಜಯ್ ಹರಿತಸ್ ಅವರ ಸಂಗೀತ, ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಲಿದೆ. ಇದೇ ಫೆಬ್ರವರಿ ತಿಂಗಳಿನ 17ನೇ ತಾರೀಕಿನಂದು “ಖಯೋಸ್” ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಆರಂಭಿಕ ಯಶಸ್ಸಿನ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

