ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಸದ್ಯ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರೇ ನಾಯಕರಾಗಿ ನಟಿಸುತ್ತಿರುವ ಸಿನಿಮಾಗಳೇ ಮುಖ್ಯಭೂಮಿಕೆಯಲ್ಲಿ ನಿಂತರೆ, ಇವುಗಳ ಜೊತೆಗೆ ಇತರ ಸ್ಟಾರ್ ನಟರ ಜೊತೆಗೆ ಸಹನಟನಾಗಿ ನಟಿಸುತ್ತಿರುವ ಸಿನಿಮಾಗಳದ್ದೆ ಬೇರೇ ಹವಾ. ಸದ್ಯ ಇಂತಹ ಸಿನಿಮಾಗಳಲ್ಲಿ ಸುದ್ದಿ ಮಾಡುತ್ತಿರುವುದು ತಮಿಳಿನ ಸ್ಟಾರ್ ನಟ ಧನುಷ್ ಅವರ ಜೊತೆಗೆ ಶಿವಣ್ಣ ತೆರೆ ಹಂಚಿಕೊಂಡಿರುವ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ. ಸದ್ಯ ಈ ಚಿತ್ರದಿಂದ ಟೀಸರ್ ಬಿಡುಗಡೆಯ ದಿನಾಂಕ ಹೊರಬಿದ್ದಿದೆ.
ತಮಿಳಿನ ಸ್ಟಾರ್ ನಟ ಧನುಷ್ ಅವರು ನಾಯಕನಾಗಿ ನಟಿಸುತ್ತಿರುವ ಬಹು ನಿರೀಕ್ಷಿತ ಪಾನ್ ಇಂಡಿಯನ್ ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’. ಅರುಣ್ ಮಾತೇಶ್ವರ್ ಅವರ ನಿರ್ದೇಶನದ ಈ ಸಿನಿಮಾದಲ್ಲಿ ಧನುಷ್ ಅವರ ಅಣ್ಣನ್ನಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ನಟಿಸಿದ್ದಾರೆ. ಚಿತ್ರೀಕರಣವನ್ನ ಸಂಪೂರ್ಣವಾಗಿ ಮುಗಿಸಿಕೊಂಡಿರುವ ಈ ಸಿನಿಮಾದಿಂದ ಇದೀಗ ಟೀಸರ್ ಬಿಡುಗಡೆ ದಿನಾಂಕ ಹೊರಬಿದ್ದಿದೆ. ಇದೇ ಜುಲೈ 28ರ ಶುಕ್ರವಾರ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ.
ಆರಂಭದಿಂದಲೂ ಹೆಚ್ಚಿನ ಸದ್ದು ಮಾಡುತ್ತಲೇ ಇದ್ದ ಈ ಸಿನಿಮಾದ ತಾರಾಗಣ ಕೂಡ ಅಷ್ಟೇ ಅದ್ಭುತವಾಗಿದೆ. ಸತ್ಯ ಜ್ಯೋತಿ ಫಿಲಂಸ್ ನಿರ್ಮಾಣದ ಈ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಧನುಷ್, ಶಿವಣ್ಣ ಜೊತೆಗೆ ಸಂದೀಪ್ ಕಿಶನ್, ಪ್ರಿಯಾಂಕಾ ಮೋಹನನ್, ಮುಂತಾದ ಹೆಸರಾಂತ ನಟರು ಬಣ್ಣ ಹಚ್ಚಿದ್ದಾರೆ. ಜಿ ವಿ ಪ್ರಕಾಶ್ ಅವರ ಸಂಗೀತ ಸಿನಿಮಾದಲ್ಲಿದೆ. ಈ ವರ್ಷದಲ್ಲೇ ಸಿನಿಮಾ ತೆರೆಕಾಣಲಿದ್ದು, ಪ್ರಾಯಷಃ ವರ್ಷಾಂತ್ಯಕ್ಕೆ ಬರಬಹುದು ಎಂಬ ಸುದ್ದಿಗಳಿವೆ. ಸದ್ಯ ಈ ಶುಕ್ರವಾರ ಎಲ್ಲರೂ ಕಾಯುತ್ತಿದ್ದ ‘ಕ್ಯಾಪ್ಟನ್ ಮಿಲ್ಲರ್’ ಟೀಸರ್ ಎಲ್ಲರ ಮುಂದೆ ಬರಲಿದೆ.



