ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಸದ್ಯ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವು ಕನ್ನಡ ಭಾಷೆಗಷ್ಟೇ ಸೀಮಿತವಾಗಿರದೆ ನೆರೆಯ ಚಿತ್ರರಂಗಗಳ ಸ್ಟಾರ್ ನಟರ ಸಿನಿಮಾಗಳಲ್ಲಿ ಕೂಡ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂತದ್ದೇ ಒಂದು ಸಿನಿಮಾ ‘ಕ್ಯಾಪ್ಟನ್ ಮಿಲ್ಲರ್’. ತಮಿಳಿನ ಸ್ಟಾರ್ ನಟ ಧನುಷ್ ಅವರು ನಾಯಕನಾಗಿ ನಟಿಸಿರುತ್ತಿರುವ ಈ ಆಕ್ಷನ್ ಸಿನಿಮಾ ಸೆಟ್ಟೇರಿ ಹಲವು ಕಾಲ ಕಳೆದಿದೆ. ಈಗ ಈ ಸಿನಿಮಾದಿಂದ ಹೊಸ ವಿಚಾರವೊಂದು ಹೊರಬಿದ್ದಿದೆ. ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.
ಅರುಣ್ ಮಾತೆಶ್ವರನ್ ಅವರ ನಿರ್ದೇಶನದ ಈ ‘ಕ್ಯಾಪ್ಟನ್ ಮಿಲ್ಲರ್’, ಸದ್ಯದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಸದ್ಯ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೇ ಜೂನ್ 30ರಂದು ಹೊರಬೀಳಲಿದೆ. ಜೊತೆಗೆ ಸಿನಿಮಾದ ಮೊದಲ ಟೀಸರ್ ಜುಲೈ ತಿಂಗಳಿನಲ್ಲಿ ಬರಬಹುದು ಎನ್ನಲಾಗುತ್ತಿದೆ. ಬಹಳ ಕಾಲದಿಂದ ಸದ್ದು ಮಾಡುತ್ತಿದ್ದ ‘ಕ್ಯಾಪ್ಟನ್ ಮಿಲ್ಲರ್’ ಯಾವುದೇ ಹೊಸ ವಿಚಾರ ಹಂಚಿಕೊಳ್ಳದೆ ಸಿನಿಪ್ರೇಮಿಗಳಲ್ಲಿ ನಿರಾಸೆ ತಂದಿತ್ತು. ಇದೀಗ ಎಲ್ಲರಲ್ಲಿ ಸಂತಸ ನೀಡಿದೆ.


ಈ ಬಹುನಿರೀಕ್ಷಿತ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾದಲ್ಲಿ ಶಿವರಾಜಕುಮಾರ್ ಅವರು ಧನುಷ್ ಅವರ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಏನೂ ಲಭ್ಯವಾಗದೆ ಇದ್ದರೂ, ಇವರಿಬ್ಬರ ಜೊತೆಗೆ ಪ್ರಿಯಾಂಕಾ ಮೋಹನ್, ಸಂದೀಪ್ ಕಿಶನ್, ನಿವೇದಿತಾ ಸತೀಶ್ ಮುಂತಾದ ಗಣ್ಯ ಕಲಾವಿದರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಸತ್ಯ ಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾನಗೊಳ್ಳುತ್ತಿದ್ದು, ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಜಿ ವಿ ಪ್ರಕಾಶ್ ಕುಮಾರ್ ಅವರು ಚಿತ್ರಕ್ಕೆ ಸಂಗೀತ ತುಂಬಿದ್ದಾರೆ. ‘ಕ್ಯಾಪ್ಟನ್ ಮಿಲ್ಲರ್’ ಯಾವಾಗ ಚಿತ್ರಮಂದಿರಗಳಿಗೆ ಬರಲಿದ್ದಾನೆ ಎಂದು ಕಾದುನೋಡಬೇಕಿದೆಯಷ್ಟೇ.

