ರಾಗಿಣಿ ದ್ವಿವೇದಿ ಹಾಗೂ ಆರ್ ಕೆ ಚಂದನ್ ಮುಖ್ಯ ಭೂಮಿಕೆಯ ‘ಬಿಂಗೊ’ ಸಿನಿಮಾಕ್ಕೆ ಚಾಲನೆ ನೀಡಲಾಯಿತು.
ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಮತ್ತು ಆರ್ ಪರಾಂಕುಶ ನಿರ್ಮಿಸುತ್ತಿರುವ, ಈ ಚಿತ್ರಕ್ಕೆ ಶಂಕರ್ ಕೋನಮಾನಹಳ್ಳಿ ಆ್ಯಕ ಕಟ್ ಹೇಳಲಿದ್ದಾರೆ.
ಚಿತ್ರದ ಮುಹೂರ್ತ ಸಮಾರಂಭ ನಾಗರಭಾವಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಮೊದಲ ಸನ್ನಿವೇಶಕ್ಕೆ ನಟ ವಸಿಷ್ಠ ಸಿಂಹ ಆರಂಭ ಫಲಕ ತೋರಿದರು. ಸಚಿವ ವಿ.ಸೋಮಣ್ಣ ಅವರು ಕ್ಯಾಮೆರಾ ಚಾಲನೆ ಮಾಡಿದರು. ಸಚಿವರಾದ ಮುನಿರತ್ನ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಮಾತಾನಾಡಿ, “ಬಿಂಗೊ” ನನ್ನ ನಿರ್ದೇಶನದ ಎರಡನೇ ಚಿತ್ರ. ನನ್ನ ನಿರ್ದೇಶನದ ಮೊದಲ ಚಿತ್ರ “ಶಂಭೋ ಶಿವ ಶಂಕರ” ಸದ್ಯದಲ್ಲೇ ಬಿಡುಗಡೆಯಾಗಲಿದೆ. “ಬಿಂಗೊ” ಪದಕ್ಕೆ ಹಲವು ಅರ್ಥಗಳಿದೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಎಂದು ಹೇಳಬಹುದು. ಆರು ಮುಖ್ಯಪಾತ್ರಗಳಿರುತ್ತದೆ. ಅದರಲ್ಲಿ ಅತೀ ಮುಖ್ಯಪಾತ್ರದಲ್ಲಿ ರಾಗಿಣಿ ಅವರು ಅಭಿನಯಿಸುತ್ತಿದ್ದಾರೆ. ಅರ್ ಕೆ ಚಂದನ್ ನಾಯಕನಾಗಿ, ರಕ್ಷಾ ನಿಂಬರ್ಗಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾಜೇಶ್ ನಟರಂಗ, ಪವನ್(ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು “ಬಿಂಗೊ” ನಲ್ಲಿರುತ್ತಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎಂದು ವಿವರಣೆ ಕೊಟ್ಟರು.
ನಟಿ ರಾಗಿಣಿ ದ್ವಿವೇದಿ ಮಾತಾನಾಡಿ, “ಈ ಚಿತ್ರದ ಪಾತ್ರ ತುಂಬಾ ಚೆನ್ನಾಗಿದೆ. ಪಾತ್ರದ ಕುರಿತು ಹೆಚ್ಚು ಹೇಳುವ ಹಾಗಿಲ್ಲ. ಮುಂದೆ ನನ್ನ ಪಾತ್ರದ ಬಗ್ಗೆ ಮಾಹಿತಿ ನೀಡುತ್ತೀನಿ. ಒಟ್ಟಿನಲ್ಲಿ ನಾನು ಈ ಹಿಂದೆ ಮಾಡಿರುವ ಪಾತ್ರಗಳಿಗಿಂತ ಸ್ವಲ್ಪ ಭಿನ್ನ ಅಂತ ಹೇಳಬಹುದು. ಹೊಸ ನಿರ್ದೇಶಕರ ಜೊತೆ ಕೆಲಸ ಮಾಡಲು ಖುಷಿಯಾಗುತ್ತದೆ” ಎಂದರು.
ನಾನು ಧಾರಾವಾಹಿಯಲ್ಲಿ ಅಭಿನಯಿಸಬೇಕಾದರೆ, ಶಂಕರ್ ಅವರ ಪರಿಚಯವಾಯಿತು. ಈ ಚಿತ್ರದ ಕುರಿತು ಮಾತನಾಡಿದರು. ಇದೇ ಮೊದಲ ಬಾರಿಗೆ ಹಿರಿತೆರೆಯಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಾಯಕ ಆರ್ ಕೆ ಚಂದನ್.
ಇದು ನಮ್ಮ ನಿರ್ಮಾಣದ ಮೊದಲ ಚಿತ್ರ. ಕಥೆ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆವು ಎನ್ನುತ್ತಾರೆ ನಿರ್ಮಾಪಕ ಪುನೀತ ಹಾಗೂ ಆರ್ ಪರಾಂಕುಶ್
ನಾಯಕಿ ರಕ್ಷಾ ನಿಂಬರ್ಗಿ, ಸಂಗೀತ ನಿರ್ದೇಶಕ ಹಿತನ್ ಹಾಸನ್, ಛಾಯಾಗ್ರಾಹಕ ನಟರಾಜ್ ಮುದ್ದಾಲ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.



