ಸುಕ್ಕ ಸೂರಿ ನಿರ್ದೇಶನದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರು ನಾಯಕನಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರ ‘ಬ್ಯಾಡ್ ಮ್ಯಾನರ್ಸ್’.ಹಲವು ಹಿಟ್ ಸಿನಿಮಾಗಳನ್ನ ಕನ್ನಡಕ್ಕೆ ನೀಡಿರುವ ಸ್ಟಾರ್ ನಿರ್ದೇಶಕ ಸೂರಿ ಹಾಗು ಅಭಿಷೇಕ್ ಅವರ ಜೋಡಿಯ ಮೋಡಿ ನೋಡಲು ಸಿನಿರಸಿಕರಂತೂ ಕಾಯುತ್ತಲಿದ್ದಾರೆ. ಸದ್ಯ ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು, ಚಂದವನದ ತುಂಬೆಲ್ಲ ಅದರದ್ದೇ ಸುದ್ದಿ!
ತಮ್ಮ ವಿಭಿನ್ನ ರೀತಿಯ, ಆಕರ್ಷಕ ಹಾಡುಗಳಿಗೆ ಪ್ರಸಿದ್ದರಾಗಿರುವ ಚರಣ್ ರಾಜ್ ಅವರು ಸಂಗೀತ ನೀಡಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟೈಟಲ್ ಸಾಂಗ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ವಿಭಿನ್ನವಾಗಿರುವ ಈ ಹಾಡು ಬಿಡುಗಡೆಯಾದ ಒಂದು ದಿನದ ಒಳಗೆ ಒಂದು ಮಿಲಿಯನ್ ಗಿಂತಲೂ ಅಧಿಕ ವೀಕ್ಷಣೆ ಪಡೆದಿದೆ. ಹಾಡಿನ ಲಿರಿಕಲ್ ವಿಡಿಯೋವಷ್ಟೇ ಸದ್ಯ ತೆರೆಕಂಡಿದ್ದು, ಇದೆ ಹಾಡಿನ ಚಿತ್ರೀಕರಣದ ಝಲಕ್ ಗಳನ್ನೂ ವಿಡಿಯೋದಲ್ಲಿ ಕಾಣಬಹುದಾಗಿದೆ. ಧನಂಜಯ್ ರಂಜನ್ ಅವರ ಸಾಹಿತ್ಯ ಇರುವ ಈ ಹಾಡಿಗೆ ಹೆಸರಾಂತ ಗಾಯಕಿ ಉಷಾ ಉತುಪ್ ಅವರ ಧ್ವನಿಯಿದೆ. ಕೇಳುಗನನ್ನ ತನ್ನತ್ತ ಸೆಳೆದು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುವ ಈ ಹಾಡು ಇದೀಗ ಕನ್ನಡಿಗರ ಮನಗೆಲ್ಲುತ್ತಿದೆ. ಯೂಟ್ಯೂಬ್ ನ ಟ್ರೆಂಡಿಂಗ್ ಪಟ್ಟಿಯಲ್ಲಿ 7ನೇ ಸ್ಥಾನವನ್ನ ಈ ಹಾಡು ಸದ್ಯ ಪಡೆದುಕೊಂಡಿದೆ.
ದುನಿಯಾ ಸೂರಿಯವರ ನಿರ್ದೇಶನದ ಈ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾಗೆ ಸುಧೀರ್ ಕೆ ಎಂ ಅವರು ಬಂಡವಾಳ ಹೂಡಿದ್ದಾರೆ. ಅಭಿಷೇಕ್ ಅಂಬರೀಷ್ ನಾಯಕರಾದರೆ, ಇವರಿಗೆ ನಾಯಕಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಬಣ್ಣ ಹಚ್ಚಿದ್ದಾರೆ. ಇವರಷ್ಟೇ ಅಲ್ಲದೇ ತಾರ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್ ಸೇರಿದಂತೆ ಹಲವು ಹೆಸರಾಂತ ನಟರು ಈ ಸಿನಿಮಾದಲ್ಲಿನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಹಾಗು ಇತರ ಕೆಲಸಗಳನ್ನು ಮುಗಿಸಿಕೊಂಡಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಸದ್ಯದಲ್ಲೇ ಬೆಳ್ಳಿತೆರೆಗಳ ಮೇಲೆ ಬಿಡುಗಡೆಯಾಗುವ ಸಾಧ್ಯತೆಗಳಿವೆ.

