ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುತ್ರ, ‘ಯಂಗ್ ರೆಬೆಲ್ ಸ್ಟಾರ್’ ಅಭಿಷೇಕ್ ಅಂಬರೀಷ್ ಅವರು ಸದ್ಯ ತಮ್ಮ ಎರಡನೇ ಸಿನಿಮಾವಾದ ‘ಬ್ಯಾಡ್ ಮ್ಯಾನರ್ಸ್’ನ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ಸಿನಿಮಾ ‘ಅಮರ್’ ಮೂಲಕವೇ ಕನ್ನಡಿಗರ ಮನೆಮಗನಾದ ಅಭಿಷೇಕ್ ಅವರ ಎರಡನೇ ಸಿನಿಮಾ ಯಶಸ್ವಿ ನಿರ್ದೇಶಕ ದುನಿಯಾ ಸೂರಿ ಅವರ ಜೊತೆಗೆ. ಸದ್ಯ ಚಿತ್ರೀಕರಣವನ್ನ ಮುಗಿಸಿಕೊಂಡಿರುವ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಸದ್ಯ ಈ ಸಿನಿಮಾದಿಂದ ಮೊದಲ ಹಾಡಿನ ಬಿಡುಗಡೆಯ ಬಗ್ಗೆ ವಿಚಾರ ಹೊರಬಿದ್ದಿದ್ದು, ಇದೇ ಯುಗಾದಿ ಹಬ್ಬಕ್ಕೆ ತಮ್ಮ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಸಜ್ಜಾಗಿದೆ ಚಿತ್ರತಂಡ.
ಸೂರಿ ಅವರ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಒಂದು ಔಟ್ ಅಂಡ್ ಔಟ್ ಕಮರ್ಷಿಯಲ್ ಆಕ್ಷನ್ ಸಿನಿಮಾ ಆಗಿರಲಿದೆ. ಈಗಾಗಲೇ ‘ಟಗರು’ ಹಾಗು ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾಗಳ ಮೂಲಕ ಯಶಸ್ಸಿನ ಹಾದಿಯಲ್ಲಿರುವ ಸೂರಿ ಅವರಿಂದ ಇನ್ನೊಂದು ಬ್ಲಾಕ್ ಬಸ್ಟರ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ ಕನ್ನಡಿಗರು. ಅಭಿಷೇಕ್ ಅಂಬರೀಷ್ ಅವರಿಗೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಸುಮಲತಾ ಅಂಬರೀಷ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ಹೆಸರಾಂತ ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಸಂಗೀತ ಇರಲಿದ್ದು, ಇವರ ಮೋಡಿಯಿರುವ ಮೊದಲ ಹಾಡು ಇದೇ ಮಾರ್ಚ್ 22ರಂದು ಎಲ್ಲೆಡೆ ಬಿಡುಗಡೆಯಾಗಲಿದೆ. ಮೂಲಗಳ ಪ್ರಕಾರ ಬಿಡುಗಡೆಯಾಗುತ್ತಿರುವ ಹಾಡು ‘ಬ್ಯಾಡ್ ಮ್ಯಾನರ್ಸ್’ ನ ಇಂಟ್ರಡಕ್ಷನ್ ಗೀತೆ ಆಗಿರಲಿದೆ ಎನ್ನಲಾಗುತ್ತಿದೆ. ಪ್ರಾಯಷಃ ‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಟೈಟಲ್ ಸಾಂಗ್ ಒಂದು ಇದ್ದರೆ, ಅದು ಇದೇ ಇರಬಹುದೇನೋ. ಈ ಹಾಡಿನ ಚಿತ್ರೀಕರಣದ ಸಂಧರ್ಭದ್ದು ಎನ್ನಲಾಗುತ್ತಿರುವ ಫೋಟೋಗಳು ಎಲ್ಲೆಡೆ ಟ್ರೆಂಡ್ ಆಗುತ್ತಿದ್ದು, ತುಂಬಾ ಸ್ಟೈಲಿಶ್ ಆಗಿ ಅಭಿಷೇಕ್ ಅವರು ಮಿಂಚುತ್ತಿದ್ದಾರೆ.
‘ಸ್ಟುಡಿಯೋ 18 ಪ್ರೊಡಕ್ಷನ್ಸ್’ ಅಡಿಯಲ್ಲಿ ಸುಧೀರ್ ಕೆ ಎಂ ಅವರು ನಿರ್ಮಾಣ ಮಾಡುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ತನ್ನ ಪಕ್ಕ ಮಾಸ್ ರೀತಿಯಿಂದ ಎಲ್ಲರ ಗಮನ ಸೆಳೆದಿದೆ. ಇದೀಗ ಮೊದಲ ಹಾಡು ಬಿಡುಗಡೆಗೆ ಮುಂದಾಗಿರುವ ಚಿತ್ರತಂಡ, ಸದ್ಯದಲ್ಲೇ ಸಿನಿಮ ಬಿಡುಗಡೆಯ ಬಗ್ಗೆಯೂ ಘೋಷಣೆ ಮಾಡಬಹುದು. ಅಲ್ಲಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮದಿನವಾದ ಮೇ 29ರಂದು ಸಿನಿಮಾ ಬಿಡುಗಡೆಗೊಳಿಸುವ ಯೋಚನೆಯಲ್ಲಿ ಚಿತ್ರತಂಡವಿದೆ ಎನ್ನಲಾಗುತ್ತಿದೆಯಾದರು, ಯಾವುದೇ ಖಾತ್ರಿ ಸದ್ದ್ಯಕ್ಕಿಲ್ಲ. ಎಲ್ಲದಕ್ಕೂ ಕಾದು ನೋಡಬೇಕಿದೆ.

